ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಅಡ್ಯಾರ್ ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್, ಕಣ್ಣೂರು, ಗ್ರಾಮಚಾವಡಿ, ಮಲಾರ್, ಕೊಣಾಜೆ ಮತ್ತು ತುಂಬೆ ಪರಿಸರದ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿ ಕುಡಿದು ವಾಂತಿ ಮತ್ತು ಭೇದಿಯಿಂದ ಬಳಲಿದ ಘಟನೆ ಬೆಳಕಿಗೆ ಬಂದಿದೆ.
ಇದರಿಂದ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಇಲ್ಲಿ ಮಾರಲಾಗ್ತದೆ. ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ ವಾಂತಿಬೇದಿಯಿಂದ ಬಳಲಿದ್ದು ಸ್ಥಳೀಯ ವೈದ್ಯರುಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೆ ಮೂರು ಮಂದಿ ಪಳ್ನೀರ್ ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಉಳಿದ 12 ಮಂದಿ ತುಂಬೆಯಲ್ಲಿರುವ ಖಾಸಗಿ ಆಸ್ಪತ್ರೆ ಮುಂತಾದ ಕಡೆ ಹೆಚ್ಚಿನ ಔಷಧೋಪಚಾರವನ್ನು ಹೊರರೋಗಿಗಳಾಗಿ ಪಡೆದಿದ್ದಾರೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಇವರಿಗೆ ವಾಟ್ಸಪ್ ಮುಖಾಂತರ ದೂರು ಸಲ್ಲಿಕೆಯಾಗಿದ್ದು ತಕ್ಷಣವೇ ಇವರಿಬ್ಬರೂ ಅಡ್ಯಾರ್ ನಲ್ಲಿರುವ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಎಳನೀರಿನ ಸ್ಯಾಂಪಲನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ
ಇನ್ನು ಫಳ್ನೀರ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲೆಯಾಗಿರುವ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ವೈದ್ಯರೊಂದಿಗೆ ಚರ್ಚೆ ಮಾಡಲಾಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಇವರ ತಂಡ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆಯು ಪ್ರಕಟಣೆಯಲ್ಲಿ ನೀಡಿದೆ.