ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊರ ರಾಜ್ಯದ ಯುವತಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್(38), ಮಣಿ ಮತ್ತು ಕುಂಪಲದ ಮಿಥುನ್(30) ಎಂದು ಗುರುತಿಸಲಾಗಿದೆ.

ಈ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು ಮೊನ್ನೆ ರಾತ್ರಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಮಧ್ಯಾರಾತ್ರಿ 1.30 ಸುಮಾರಿಗೆ 112 ಒಂದು ಕರೆ ಬಂದಿರುತ್ತದೆ. ಒಂದು ಹುಡುಗಿ ಕೂಗಾಡುತ್ತಿದ್ದಾಳೆ, ಆಕೆಗೆ ಹಲ್ಲೆ ಮಾಡಿದ್ದಾರೆ ಎಂಬ ದೂರು ಸ್ವೀಕೃತವಾಗಿದೆ. ತಕ್ಷಣವೇ ಹೊಯ್ಸಳ ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ತದ ನಂತರ ಬೆಳಗ್ಗೆ ಅವಳ ಹೇಳಿಕೆ ಪ್ರಕಾರ ನಿನ್ನೆ ರಾತ್ರಿ ಯಾರೋ ಅವಳಿಗೆ ಮದ್ಯಪಾನ ಮಾಡಿಸಿದ್ದಾರೆ. ಆನಂತರ ಪ್ರಜ್ಞೆ ತಪ್ಪಿದ್ದು, ಕಾರಲ್ಲಿ ಮೂರು ಜನ ಇದ್ದಿದ್ದಾಗಿ ಯುವತಿ ತಿಳಿಸಿದ್ದಾಳೆ. ಪ್ರಜ್ಞೆ ಬಂದ ನಂತರ ಅವಳ ಒಳಉಡುಪು ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಪ್ರಜ್ಞೆ ಬಂದು ಅವಳು ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆ ಬಳಿಕ ಸ್ಥಳೀಯರ ಸಹಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ.
ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂಬ ಯುವತಿ ಹೇಳಿಕೆ ನೀಡಿದ್ದಾರೆ. ಆದರೆ, ವೈದ್ಯಕೀಯ ವರದಿ ಬಂದ ಬಳಿಕ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆಯೋ ಅಥವಾ ಇಲ್ಲವೋ ಎಂಬುವುದು ತಿಳಿಯಲಿದೆ. ಮಂಗಳೂರಿನಲ್ಲಿ ಪರಿಚಯವಾದ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಪೊಲೀಸರ ಮುಂದೆ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ಉಳ್ಳಾಲ ಪೊಲೀಸರು ಮುಂದುವರೆಸಿದ್ದಾರೆ.