ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜನವರಿ 31 ರಂದು ‘ಮಾಂಗಲ್ಯ ಭಾಗ್ಯ’ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅರ್ಹರು ನೊಂದಣಿ ಮಾಡಿಕೊಂಡು ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್ ಅವರು ತಿಳಿಸಿದರು.
ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಕುರಿತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ ವತಿಯಿಂದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ವನ್ನು ಆಯೋಜಿಸಿದ್ದು, ಸಾಮೂಹಿಕ ವಿವಾಹಕ್ಕೆ ಅರ್ಜಿಗಳನ್ನು ಸಲ್ಲಿಸಲು ಜನವರಿ 13 ಅಂತಿಮ ದಿನಾಂಕವಾಗಿರುತ್ತದೆ. ಅರ್ಜಿಗಳನ್ನು ತಾಲ್ಲೂಕು ಕಚೇರಿಗಳಲ್ಲಿ, ಜಿಲ್ಲೆಯ ಎ ಗ್ರೇಡ್ ಹಾಗೂ ಬಿ ಗ್ರೇಡ್ ದೇವಸ್ಥಾನಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದು. ನಂತರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.
ವಿವಾಹಕ್ಕೆ ನೋಂದಣಿ ಮಾಡಿಕೊಳ್ಳುವ ವಧು ವರರ ಜನ್ಮ ದಿನಾಂಕವನ್ನು ಪರಿಶೀಲನೆ ನಡೆಸಬೇಕು. ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ತುಂಬಿರಬೇಕು. ವಯಸ್ಸಿನ ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ ಅಥವಾ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪರಿಶೀಲಿಸಬೇಕು. ವಧು ವರರು ಅನಕ್ಷರಸ್ಥರು ಇದ್ದರೆ ವಯಸ್ಸಿನ ದೃಢೀಕರಣಕ್ಕಾಗಿ ತಾಲ್ಲೂಕು ವೈದ್ಯಾಧಿಕಾರಿಗಳಿಂದ ವಯಸ್ಸಿನ ದೃಢೀಕರಣ ಪತ್ರ ನೀಡಬೇಕು. ಸಾಮೂಹಿಕ ವಿವಾಹ ಆದ ನಂತರ ವಿವಾಹವನ್ನು ನೋಂದಣಿ ಮಾಡಿಸಬೇಕು. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ಇಲ್ಲ ಹಾಗೂ ಕ್ರಿಮಿನಲ್ ಪ್ರಕರಣ ಗಳು ಇಲ್ಲ ಎಂಬುವ ಕುರಿತು ಲಿಖಿತ ಹೇಳಿಕೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಾಹಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಹಾಗೂ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಖರೀದಿಸಲು 40 ಸಾವಿರ ಸೇರಿದಂತೆ ಒಂದು ಜೋಡಿಗೆ ಒಟ್ಟು 55 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲ್ಲೂಕು ಮಟ್ಟದಲ್ಲಿ ಜಾಹೀರಾತು ಫಲಕಗಳ ಮೂಲಕ, ವಿವಿಧ ದೇವಸ್ಥಾನಗಳಲ್ಲಿ ಪ್ಲೆಕ್ಸ್ ಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ಅಗತ್ಯ ಪ್ರಚಾರ ನೀಡಬೇಕು ಎಂದರು.
ಸಭೆಯಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.