ಮೈಸೂರು: ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮನೋರಂಜನ್ ಸ್ನೇಹಿತರು ಈ ವಿಚಾರವನ್ನು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಮನೋರಂಜನ್ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮನೋರಂಜನ್ ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರದ ಬಗ್ಗೆ ಆತನ ಪೋಷಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವನ್ನೇ ಪಡೆಯುತ್ತಿರಲಿಲ್ಲ. ಅದಕ್ಕೆ ಹೇಗೆ ಹಣ ಹೊಂದಿಸುತ್ತಿದ್ದ ಎಂಬುದು ತಿಳಿದಿಲ್ಲ ಎಂದು ಆತನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮನೋರಂಜನ್ ಆಗಾಗ ದೆಹಲಿಗೆ ತೆರಳಲು ಆತನಿಗೆ ಹಣ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಇತ್ತೀಚೆಗಷ್ಟೇ ತನಿಖೆ ಆರಂಭಿಸಿದ್ದರು. ಆದರೆ ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿರಲಿಲ್ಲ.
ಡಿಸೆಂಬರ್ ಮೂರರಂದು ಮನೋರಂಜನ್, ಸಾಗರ್ ಶರ್ಮಾ ಮತ್ತು ಇತರ ಆರೋಪಿಗಳು ಸಂಸತ್ ಭವನದ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು. ಕೆಲ ಆರೋಪಿಗಳು ಸಂಸತ್ ಭವನದ ಹೊರಗೆ ಪ್ರತಿಭಟನೆ ಮತ್ತು ದಾಳಿ ನಡೆಸಿದ್ದರೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಲೋಕಸಭೆಯ ಒಳ ನುಗ್ಗಿ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು.