ಮೈಸೂರು : ಸಂಸತ್ ಭವನದೊಳಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ಮೈಸೂರಿನ ಮನೋರಂಜನ್ ನಿವಾಸಕ್ಕೆ ದೆಹಲಿ ಪೊಲೀಸರು ಪರಿಶೀಲನೆ ನಡೆಸಿ ಕುಟುಂಬದವರ ವಿಚಾರಣೆ ನಡೆಸಿದ್ದಾರೆ. ವಿಜಯನಗರದ ೨ನೇ ಹಂತದಲ್ಲಿರುವ ಮನೋರಂಜನ್ ಮನೆಗೆ ದೆಹಲಿಯ ಮಹಿಳಾ ಪೊಲೀಸ್ ಸೇರಿದಂತೆಮೂವರ ತಂಡ ಭೇಟಿ ನೀಡಿ ಮನೆಯನ್ನು ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವೇಳೆ ಮನೋರಂಜನ್ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜೊತೆಗೆ ಮನೋರಂಜನ್ ಕೊಠಡಿಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಪುಸ್ತಕ ಸೇರಿದಂತೆ ಮನೋರಂಜನ್ ಬಳಸುತ್ತಿದ್ದ ವಸ್ತುಗಳನ್ನು ವೀಕ್ಷಣೆ ಮಾಡಿರುವುದಾಗಿ ತಿಳಿದುಬಂದಿದೆ. ದೆಹಲಿ ಪೊಲೀಸರು ಆಗಮಿಸಿದ ವೇಳೆ ಮನೋರಂಜನ್ ತಂದೆ ಡಿ.ದೇವರಾಜೇಗೌಡ ಅವರು ಮನೆಯಲ್ಲಿ ಇರಲಿಲ್ಲವಾದ್ದರಿಂದ ತಾಯಿ ಶೈಲಜಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮನೆಗೆ ಆಗಮಿಸಿದ ದೇವರಾಜೇಗೌಡ ಅವರನ್ನು ಸಹ ವಿಚಾರಣೆ ನಡೆಸಿದರು ಎನ್ನಲಾಗಿದೆ.
ಮನೋರಂಜನ್ ಮನೆಯ ಬಳಿ ವಿಜಯನಗರ ಠಾಣೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.ಕಳೆದ ಬುಧವಾರ ಲೋಕಸಭಾ ಅಧಿವೇಶನ ನಡೆಯುವ ಸಂದರ್ಭ ಇಬ್ಬರು ದುಷ್ಕರ್ಮಿಗಳು ಸಂಸತ್ ಭವನದೊಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ್ದರು. ಈ ಪ್ರಕರಣ ಸಂಬಂಧ ಒಟ್ಟು ೭ ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಳಿಸಿರುವ ಕೇಂದ್ರ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು, ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮನೋರಂಜನ್ ಬ್ಯಾಂಕ್ ಖಾತೆ, ಆತನ ಫೋನ್‌ಗೆ ಬಂದ ಕಾಲ್ ಡಿಟೇಲ್ಸ್ ಹಾಗೂ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಜೊತೆ ಆತ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಹಾಗೂ ಆತನ ಕುಟುಂಬದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.