ಹೊಸದಿಲ್ಲಿ: ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಭಾಕರ್ ಅವರು ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿದರು.
ಏರ್ ಇಂಡಿಯಾದ ನೇರ ವಿಮಾನದಲ್ಲಿ (ಎಐ 142) ಪ್ಯಾರಿಸ್‌ನಿಂದ ಹೊರಟ ಮನು ಭಾಕರ್, ಬುಧವಾರ ಬೆಳಿಗ್ಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ವಿಮಾನವು ಬೆಳಿಗ್ಗೆ 9.20ಕ್ಕೆ ಲ್ಯಾಂಡ್ ಆಯಿತು.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ಬರೆದ ಶೂಟರ್‌ಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು, ಮನು ಭಾಕರ್ ಅವರ ಪೋಷಕರು, ಸಂಬಂಧಿಕರು, ಬಾಲ್ಯದ ತರಬೇತುದಾರರು ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು.
ಹಾಡು, ನೃತ್ಯ, ತಮಟೆ ಬಾರಿಸುವ ಮೂಲಕ ಭಾಕರ್ ಆಗಮನವನ್ನು ಏರ್‌ಪೋರ್ಟ್‌ನಲ್ಲಿ ಜನ ಸಂಭ್ರಮಿಸಿದರು.
22 ರ ಹರೆಯದ ಮನು ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನೊಂದಿಗೆ ಪದಕಪಟ್ಟಿಯಲ್ಲಿ ಭಾರತದ ಖಾತೆಯನ್ನು ತೆರೆದ ಬಳಿಕ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಇನ್ನೊಂದು ಕಂಚಿನ ಪದಕ ಸೇರಿಸಿದ್ದರು.
ಶನಿವಾರ ಮತ್ತೆ ಪ್ಯಾರಿಸ್‌ಗೆ ತೆರಳಲಿರುವ ಭಾಕರ್, ಆಗಸ್ಟ್ 11 ರಂದು ನಡೆಯಲಿರುವ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ.