ಬೆಂಗಳೂರು: ಮಾಜಿ ಶಾಸಕ ಎಂಸಿ ಅಶ್ವಥ್ ಹಾಗೂ ಚನ್ನಪಟ್ಟಣದ ೩೦೦ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿ – ಜೆಡಿಎಸ್‌ನ ಮೈತ್ರಿಯನ್ನು ಸಹಿಸಿಕೊಳ್ಳಲು ಆಗದೇ ರಾಜ್ಯದ ವಿವಿಧ ಭಾಗದಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಪ್ರತಿಯೊಂದು ವರ್ಗದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜನಪರ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.