Sunday, August 31, 2025
Google search engine

Homeರಾಜ್ಯಸುದ್ದಿಜಾಲಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆ: ಶಾಸಕ ಎ.ಆರ್. ಕೃಷ್ಣಮೂರ್ತಿ

ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆ: ಶಾಸಕ ಎ.ಆರ್. ಕೃಷ್ಣಮೂರ್ತಿ

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದ್ದು ಕೋಟ್ಯಾಂತರ ರೂ. ಅನುದಾನವನ್ನು ಇದಕ್ಕೆ ನೀಡಲಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಅವರು ಪಟ್ಟಣದ ಬಳೇಪೇಟೆಯ ಸೈಯದ್ ಮುರ್ತುಜಾ ಷಾಖಾದ್ರಿ ದರ್ಗಾದ ಬಳಿ ಶಾದಿಮಹಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಕ್ಕಹಳ್ಳಿಯಲ್ಲಿ ಚರ್ಚ್ ಹಾಗೂ ಇಲ್ಲಿನ ಕ್ರಿಶ್ವಿಯನ್ನರು ವಾಸ ಮಾಡುವ ಕಾಲೋನಿಗಳ ರಸ್ತೆ ಅಭಿವೃದ್ಧಿ, ಕೊಳ್ಳೇಗಾಲದ ಅಲ್ಪಸಂಖ್ಯಾತರ ವಾರ್ಡ್‌ಗಳ ರಸ್ತೆ ಅಭಿವೃದ್ಧಿ, ಮಾಂಬಳ್ಳಿ ಗ್ರಾಮದ ರಸ್ತೆ ಚರಂಡಿ ಅಭಿವೃದ್ಧಿಗೆ ನೀಡಲಾಗಿದೆ. ಕೊಳ್ಳೇಗಾಲದಲ್ಲಿ ೧ ಕೋಟಿ ರೂ. ಮುಸ್ಲಿಮರ ಶಾದಿಮಹಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ನೀಡಲಾಗಿದೆ. ಯಳಂದೂರು ಪಟ್ಟಣದಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಶಾದಿಮಹಲ್ ಕಟ್ಟಡಕ್ಕೆ ನೀಡಲಾಗಿದ್ದು ಇದಕ್ಕೆ ಭೂಮಿಪೂಜೆ ನೆರವೇರಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕೊಳ್ಳೇಗಾಲದಲ್ಲಿ ಅಲ್ಪಸಂಖ್ಯಾತರಿಗೆ ಮೊರಾರ್ಜಿದೇಸಾಯಿ ವಸತಿ ಶಾಲೆಯನ್ನು ನಿರ್ಮಾಣ ಮಾಡಲು ಅನುದಾನ ಲಭಿಸಿದೆ. ಇದಕ್ಕೆ ಈಗಾಗಲೇ ೧೫ ಎಕೆರೆ ಜಮೀನನ್ನು ಗುರುತಿಸಲಾಗಿದೆ.


ಅಹಿಂದ ಪರಿಕಲ್ಪನೆಯಲ್ಲಿ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಹಿಂದಿನ ಶಾಸಕರ ಅನುದಾನದಲ್ಲಿ ನಾನು ದಲಿತ, ನಾಯಕ, ಉಪ್ಪಾರ, ಲಿಂಗಾಯಿತ, ಸವಿತಾ ಸಮಾಜ, ಕುಂಬಾರ, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ಸಮುದಾಯ ಭವನಗಳಿಗೂ ಅನುದಾನವನ್ನು ಯಾವ ಕೋಮನ್ನು ಬಿಡದೆ ನೀಡಿದ್ದೇನೆ. ಈ ಬಾರಿ ೫೦ ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು ಇದರಲ್ಲಿ ೩೨.೫ ಕೋಟಿ ರೂ. ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ರಸ್ತೆಗಳ ನಿರ್ಮಾಣ ಹಾಗೂ ೧೨.೫ ಕೋಟಿ ರೂ.ಗಳನ್ನು ಗ್ರಾಮೀಣ ರಸ್ತೆ ಇತರೆ ಕಾಮಗಾರಿಗಳಿಗೆ ಬಳಸಿಕೊಳ್ಳಲು ತೀರ್ಮಾನ ಮಾಡಲಾಗಿದೆ. ನೀರಾವರಿ ಯೋಜನೆಗೆ ೧೨೦ ಕೋಟಿ ರೂ. ಅನುದಾನ ಲಭಿಸಿದೆ. ಇಡೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಶಾಸಕರು ಸರ್ವ ಜನಾಂಗದ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಸಂವಿಧಾನದಡಿಯಲ್ಲಿ ಸರ್ವರಿಗೂ ಒಳಿತನ್ನು ಮಾಡುವ ಪ್ರಮಾಣಿಕ ಕೆಲಸವನ್ನು ಮಾಡುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಖಾಯಂ ಗೊಳಿಸಲು ಸದನದಲ್ಲಿ ಧ್ವನಿ ಎತ್ತಿದ್ದರಿಂದ ಇಡೀ ರಾಜ್ಯದ ಪೌರ ಕಾರ್ಮಿಕರು ಇಂದು ಖಾಯಂ ನೌಕರರಾಗಿದ್ದಾರೆ. ಇ-ಖಾತೆಯ ಪರವಾಗಿ ಧ್ವನಿ ಎತ್ತಿದ್ದು ಈಗ ಎಲ್ಲರಿಗೂ ಇದರಿಂದ ಲಾಭವಾಗುತ್ತಿದೆ. ಇವರು ತಮ್ಮ ತಂದೆ ಬಿ.ರಾಚಯ್ಯರಂತೆ ಶಾಶ್ವತ ಕೆಲಸಗಳಿಗೆ ಹೆಚ್ಚುನ ಮನ್ನಣೆ ನೀಡುವ ರಾಜಕಾರಣಿಯಾಗಿದ್ದಾರೆ ಎಂದು ಬಣ್ಣಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷೆ ಜೆ. ಯೋಗೇಶ್, ಮುಸ್ಲಿಂ ಜನಾಂಗದ ಮುಖಂಡ ನಯಾಜ್ ಖಾನ್, ಮಾಂಬಳ್ಳಿ ಮುಜ್ಜು ನಗರಸಭಾ ಸದಸ್ಯ ಅನ್ಸರ್ ಬೇಗ್ ಮಾತನಾಡಿದರು. ಪಪಂ ಅಧ್ಯಕ್ಷ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ.ರವಿ, ಸುಶೀಲಾ ಪ್ರಕಾಶ್ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್‌ಬೇಗ್, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಕೆಆರ್‌ಐಡಿಎಲ್‌ನ ಚಿಕ್ಕಲಿಂಗಯ್ಯ, ಚಾಮುಲ್ ನಿರ್ದೇಶಕ ಕಮರವಾಡಿರೇವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಜೆ. ಶ್ರೀನಿವಾಸ್, ಕಿನಕಹಳ್ಳಿ ಪ್ರಭುಪ್ರಸಾದ್ ಸೇರಿದಂತೆ ಅನೇಕರು ಇದ್ದರು.


RELATED ARTICLES
- Advertisment -
Google search engine

Most Popular