ಮಂಗಳೂರು (ದಕ್ಷಿಣ ಕನ್ನಡ): ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಈಗಲಾದರೂ ನ್ಯಾಯ ಸಿಗಬೇಕು. ಹೀಗಾಗಿ ಸರ್ಕಾರ ಮರುತನಿಖೆ ಮಾಡಬೇಕೆಂದು ಆಗ್ರಹಿಸಿ ಕೆಆರ್ ಎಸ್ – ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬೆಳ್ತಂಗಡಿಯಿಂದ ಆರಂಭಿಸಿ ಧರ್ಮಸ್ಥಳದ ಮಾರ್ಗವಾಗಿ ಆಗಸ್ಟ್ 26, 2023ರಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಆರ್ ಎಸ್ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡರು ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಪಕ್ಷದ ಅಧ್ಯಕ್ಷರಾದ ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ ಆಗಸ್ಟ್ 26, 2023ರಿಂದ ಆರಂಭ ಆಗುವ ಪಾದಯಾತ್ರೆಯು ಸೆಪ್ಟೆಂಬರ್ 7-09-2023ರಂದು ಬೆಂಗಳೂರು ತಲುಪಲಿದೆ. ಸೆಪ್ಟೆಂಬರ್ 8 ರಂದು ವಿಧಾನಸೌಧ ಮುಟ್ಟಲಿದೆ. ಸುಮಾರು 14 ದಿನಗಳ ಕಾಲ ನಡೆಯಲಿರುವ ಸುಮಾರು 330 ಕಿಲೋಮೀಟರ್‌ಗಳ ಈ ಪಾದಯಾತ್ರೆಯಲ್ಲಿ ಕೆಆರ್ ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೌಜನ್ಯ ಕೇಸ್ ನ ಮರುತನಿಖೆಗೆ ಆಗ್ರಹಿಸಲಿದೆ.