Saturday, April 19, 2025
Google search engine

Homeಸ್ಥಳೀಯಮೇರಿ ಕ್ಯೂರಿ, ಸಿ.ವಿ.ರಾಮನ್ ವಿಜ್ಞಾನ ತಾರೆಗಳು: ಸಾಹಿತಿ ಬನ್ನೂರು ರಾಜು

ಮೇರಿ ಕ್ಯೂರಿ, ಸಿ.ವಿ.ರಾಮನ್ ವಿಜ್ಞಾನ ತಾರೆಗಳು: ಸಾಹಿತಿ ಬನ್ನೂರು ರಾಜು

ಮೈಸೂರು: ಭಾರತದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿಯೇ ಮೊಟ್ಟ ಮೊದಲಿಗೆ ಭೌತ ವಿಜ್ಞಾನದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದು ಭಾರತದ ಹಿರಿಮೆಯನ್ನು ಜಗದಗಲ ಬೆಳಗಿದ ಸರ್ ಸಿ.ವಿ.ರಾಮನ್ ಮತ್ತು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಜಗತ್ತಿನ ಏಕೈಕ ಮಹಿಳೆ ಎನಿಸಿದ ಪೋಲೆಂಡ್ ನ ಮೇರಿ ಕ್ಯೂರಿ ಇವರಿಬ್ಬರೂ ವಿಜ್ಞಾನ ಲೋಕದ ಧ್ರುವತಾರೆಗಳೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಸ್ಥೆಗಳು ಸಂಯುಕ್ತವಾಗಿ ತಾಲೂಕಿನ ಹೂಟಗಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್ ಮತ್ತು ಮೇರಿ ಕ್ಯೂರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತರತ್ನ ಸರ್ ಸಿ.ವಿ. ರಾಮನ್ ಅವರು ಮೂಲತಃ ತಮಿಳು ನಾಡಿನವರಾದರೂ ಕೂಡ ವಿಜ್ಞಾನ ಲೋಕದ ಅವರ ಎಲ್ಲಾ ರೀತಿಯ ಸಂಶೋಧನೆಗಳಿಗೂ ಕನ್ನಡನಾಡು ಕರ್ಮಭೂಮಿಯಾಗಿತ್ತು. ವಿಶೇಷವಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಬೆಳಕಿನ ಆವಿಷ್ಕಾರವಾದ ರಾಮನ್ ಎಫೆಕ್ಟ್ ಅಥವಾ ರಾಮನ್ ಪರಿಣಾಮದ ಸಂಶೋಧನೆಗೆ ಮೂಲವೇ ಕನ್ನಡ ನಾಡಿನ ಬೆಂಗಳೂರಾಗಿದ್ದು ಇದರ ಸಂಪೂರ್ಣ ಕ್ರೆಡಿಟ್ ನಮ್ಮನಾಡು ಕರ್ನಾಟಕಕ್ಕೆ ಸಲ್ಲುತ್ತದೆಂದರು.

೧೯೨೮ ಫೆಬ್ರವರಿ ೨೮ ರಂದು ಬೆಂಗಳೂರಿನ ಸುಪ್ರಸಿದ್ಧ ಸೆಂಟ್ರಲ್ ಕಾಲೇಜಿನ ಭೌತಶಾಸ್ತ್ರ ಸಂಘದವರು ಭೌತ ವಿಜ್ಞಾನಿ ಸಿವಿ ರಾಮನ್ ಅವರನ್ನು ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಲು ಕಾಲೇಜಿಗೆ ಕರೆಸಿದ್ದರು. ಆ ಸಂದರ್ಭದಲ್ಲಿ ರಾಮನ್ನರು ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಕನ್ನು ಕುರಿತು ತಮ್ಮದೇ ಆದ ಆವಿಷ್ಕಾರದ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇದೇ ವಿಷಯ ಮುಂದೆ ಬೆಳಕಿನ ಬಗೆಗಿನ ಮಹತ್ವಪೂರ್ಣ ಸಂಶೋಧನೆಯಾಗಿ ರಾಮನ್ ಪರಿಣಾಮ ಎಂದು ಹೆಸರಾಗಿ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನವಾದದ್ದು ಈಗ ವಿಶ್ವ ವಿಜ್ಞಾನ ಲೋಕದ ಇತಿಹಾಸವಾಗಿದೆ. ಹಾಗೆಯೇ ‘ವಿಜ್ಞಾನ ಮಹಿಳೆಯರಿಗಲ್ಲ’ ಎನ್ನುತ್ತಿದ್ದ ಕಾಲಘಟ್ಟದಲ್ಲಿ ತನ್ನ ಕುಟುಂಬದ ತುಂಬಾ ವಿಜ್ಞಾನದ ಸಂಸ್ಕೃತಿಯನ್ನೇ ಸೃಷ್ಟಿಸಿದ ಮೇರಿ ಕ್ಯೂರಿಯ ಜೀವನವೇ ಒಂದು ಇತಿಹಾಸವಾಗಿ ಹೊಸದೊಂದು ಬದುಕಿನ ಸಂದೇಶವನ್ನು ಸಾರುತ್ತದೆ. ಅವರು ಮಹದದ್ಭುತ ಸಂಶೋಧನೆಗಳನ್ನು ಮಾಡಿ ಒಂದಲ್ಲ ಅಂತ ಎರಡು ಬಾರಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಮೊದಲ ವಿಜ್ಞಾನಿ ಮಾತ್ರವಲ್ಲ, ಶತಮಾನಗಳಿಂದ ಬಂದಿದ್ದ ಹೆಣ್ಣು-ಗಂಡೆಂಬ ಲಿಂಗ ತಾರತಮ್ಯದ ಅಡಚಣೆಯ ಗೋಡೆಯನ್ನು ಒಡೆದು ಮುಂದೆ ಸಾಗಿದವರು.ಅಷ್ಟೇ ಅಲ್ಲ, ದಾಖಲೆಯ ಮೊದಲ ಮಹಿಳಾ ಪ್ರೊಫೆಸರ್ ಕೂಡ ಆಗಿ ತನ್ನನ್ನೂ ಒಳಗೊಂಡಂತೆ ಪತಿ ಪಿಯರೀ ಕ್ಯೂರಿ, ಮಗಳು ಐರೇನ್ ಕ್ಯೂರಿ, ಅಳಿಯ ಫ್ರೆಡೆರಿಕ್ ಜ್ಯೂಲಿಯಟ್ ಸೇರಿದಂತೆ ಅವರ ಕುಟುಂಬ ಐದು ನೊಬೆಲ್ ಪ್ರಶಸ್ತಿಗಳನ್ನು ಪಡೆದು ವಿಶ್ವದಾಖಲೆ ಬರೆದಿದೆ ಎಂದು ತಿಳಿಸಿದರು.

ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್. ಜಿ.ಸೀತಾರಾಮ್ ಅವರು ಸರ್ ಸಿ. ವಿ. ರಾಮನ್ ಮತ್ತು ಮೇರಿ ಕ್ಯೂರಿ ಅವರ ಬದುಕು, ಸಂಶೋಧನೆ,ಸಾಧನೆ, ಸಿದ್ಧಿ ಕುರಿತಂತೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅತ್ಯಂತ ಸರಳವಾಗಿ ಉಪನ್ಯಾಸ ನೀಡಿದರು. ಹಾಗೆಯೇ ಹತ್ತನೇ ತರಗತಿಯ ವಿದ್ಯಾರ್ಥಿನಿ ಕು.ಅನುಷಾ ಅವರು ಮೇರಿ ಕ್ಯೂರಿ ಕುರಿತು ಮಾತನಾಡಿ ಗಮನ ಸೆಳೆದರಲ್ಲದೆ ರೂಪಶ್ರೀ ಜೊತೆಗೂಡಿ ಕವಿರಾಜಮಾರ್ಗ ಕಾವ್ಯವಾಚನ ಮಾಡಿ ಒಂದು ಕ್ಷಣ ನೆರೆದಿದ್ದವರನ್ನು ಮೂಕ ವಿಸ್ಮಿತಗೊಳಿಸಿದರು.ಹಿರಣ್ಮಯಿ ಪ್ರತಿಷ್ಟಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಖ್ಯಾತ ಕಲಾವಿದೆ ಹಾಗು ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಇದೇ ಸಂದರ್ಭದಲ್ಲಿ ನಡೆದ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ್ ನಾಯಕ (ಪ್ರ), ವಿನೋದ (ದ್ವಿ), ಗಗನ (ತೃ), ಗೀತಗಾಯನ ಸ್ಪರ್ಧೆಯಲ್ಲಿ ಎನ್.ಚಂದು(ಪ್ರ), ಶಶಿರೇಖಾ (ದ್ವಿ),ಉಲ್ಲಾಸ್ (ತೃ), ಭಾಷಣ ಸ್ಪರ್ಧೆಯಲ್ಲಿ ಅನುಷಾ (ಪ್ರ), ಯಶಸ್ವಿನಿ(ದ್ವಿ), ಮಂಗಳಮ್ಮ(ತೃ), ಅವರುಗಳಿಗೆ ಬಹುಮಾನ ವಿತರಿಸಿ ಗೌರವಿಸಿದರು.

ಸರ್ ಸಿ.ವಿ.ರಾಮನ್ ಮತ್ತು ಮೇರಿ ಕ್ಯೂರಿ ಅವರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪಿ.ವಿ.ಸಂಗೀತಾ ಅಧ್ಯಕ್ಷತೆ ವಹಿಸಿದ್ದರು. ಜಾದೂಗಾರ್ ಗುರುಸ್ವಾಮಿ ಶಿಕ್ಷಕರಾದ ಡಿ.ಎಂ.ಮಹದೇವು, ಹೆಚ್.ಬಿ.ಅಣ್ಣೇಗೌಡ, ಎಂ.ರಂಗಸ್ವಾಮಿ, ಎಂ.ಎಸ್.ಶಿವಕುಮಾರ್, ಹೆಚ್.ಬಿ.ರೂಪಶ್ರೀ, ಪಿ.ಪುಷ್ಪ, ಕೆ.ಎಸ್.ಈಶ್ವರಿ, ಶರೀನ್ ಬಾನು, ಎಸ್.ಎಸ್.ಉಜ್ವಲಾ, ಭಾಗ್ಯಲಕ್ಷ್ಮಮ್ಮ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular