ಹೊಸದಿಲ್ಲಿ : ೪೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ.
ವಿವಾದವನ್ನು ಪರಿಹರಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಮೈಸೂರಿನಲ್ಲಿರುವ ಇನ್ಫೋಸಿನ್ ಕ್ಯಾಪಂಸ್‌ನಲ್ಲಿ ಹಲವು ತಿಂಗಳುಗಳ ಕಾಲ ಮೂಲಭೂತ ತರಬೇತಿ ಪಡೆದ ೪೦೦ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗಿದೆ. ಈ ಬಗ್ಗೆ ಇನ್ಫೋಸಿಸ್ ಕೂಡ ಒಪ್ಪಿಕೊಂಡಿದೆ. ಇನ್ಫೋಸಿಸ್‌ನ ಧೋರಣೆಯ ವಿರುದ್ಧ ಐಟಿ ವಲಯದ ಸಂಘಟನೆಯಾದನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಉದ್ಯೋಗಿಗಳ ಸೆನೆಟ್’ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ. ಮಾತ್ರವಲ್ಲದೆ, ವಜಾಗೊಳಿಸಲಾಗಿರುವ ಉದ್ಯೋಗಿಗಳ ಸಂಖ್ಯೆ ೩೦೦ ಅಲ್ಲ, ೭೦೦ ಎಂದು ವಾದಿಸಿದೆ.
ದೂರಿನಲ್ಲಿ, ಇತ್ತೀಚೆಗಷ್ಟೇ ಇನ್ಫೋಸಿಸ್‌ಗೆ ಸೇರ್ಪಡೆಗೊಂಡ ಕ್ಯಾಂಪಸ್ ನೇಮಕಾತಿದಾರರನ್ನು ಬಲವಂತವಾಗಿ ವಜಾಗೊಳಿಸಲಾಗಿದೆ. ಈ ಎಲ್ಲ ಉದ್ಯೋಗಿಗಳು ಸುಮಾರು ೨ ವರ್ಷಗಳ ಹಿಂದೆಯೇ ಆಫರ್ ಲೆಟರ್‌ಗಳನ್ನು ಪಡೆದಿದ್ದರು. ಅದಾಗ್ಯೂ, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಲ್ಲಿ ಸಂಸ್ಥೆಯು ಎರಡು ವರ್ಷ ವಿಳಂಬ ಮಾಡಿದೆ. ಇದೀಗ, ಎಲ್ಲರನ್ನೂ ಕೆಲಸದಿಂದ ವಜಾ ಮಾಡಿದೆ” ಎಂದು ಆರೋಪಿಸಿದೆ.
ಇನ್ಫೋಸಿಸ್ ವಿರುದ್ಧ ತನಿಖೆ ನಡೆಸಬೇಕು. ಈ ರೀತಿಯ ವಜಾಗೊಳಿಸುವಿಕೆಯನ್ನು ತಡೆಯಲು ಇನ್ಫೋಸಿಸ್ ವಿರುದ್ಧ ತಡೆಯಾಜ್ಞೆ ಹೊರಡಿಸಬೇಕು. ಜೊತೆಗೆ ವಜಾಗೊಳಿಸಲ್ಪಟ್ಟ ಎಲ್ಲ ಉದ್ಯೋಗಿಗಳಿಗೆ ಮತ್ತೆ ಉದ್ಯೋಗ ನೀಡಬೇಕು. ೧೯೪೭ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗೆ ದಂಡ ವಿಧಿಸಬೇಕು” ಎಂದು ಎನ್‌ಐಟಿಇಎಸ್ ಆಗ್ರಹಿಸಿದೆ.
ಎನ್‌ಐಟಿಇಎಸ್ ದೂರಿನ ಅನ್ವಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯಕ್ಕೆ ಸೂಚಿಸಿದೆ. ಕೇಂದ್ರದ ಸೂಚನೆ ಹಿನ್ನಲೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ತಡರಾತ್ರಿ ಕಂಪನಿಗಳ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್‌ಗಳಿಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.