ಕರಾಚಿ: ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ಹೊರಗೆ ಭಾನುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ವಿಮಾನ ನಿಲ್ದಾಣದ ಹೊರಗೆ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮತ್ತು ಪ್ರಾಂತೀಯ ಸರ್ಕಾರ ಹೇಳಿದೆ. ಆದರೆ ಇದು ವಿದೇಶಿಯರನ್ನು ಗುರಿಯಾಗಿಸಿಕೊಂಡು ನಡೆದ ದಾಳಿ ಎಂದು ಪ್ರಾಂತೀಯ ಗೃಹ ಸಚಿವ ಜಿಯಾ ಉಲ್ ಹಸನ್ ಸ್ಥಳೀಯ ಟಿವಿ ವಾಹಿನಿ ಜಿಯೋಗೆ ತಿಳಿಸಿದ್ದಾರೆ.
ಇದು ಚೀನಾದ ಪ್ರಜೆಗಳ ಮೇಲೆ ನಡೆದ ದಾಳಿಯಾಗಿದ್ದು, ಅವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ತಾನದಲ್ಲಿದ್ದಾರೆ, ಅವರಲ್ಲಿ ಹೆಚ್ಚಿನವರು ಬೀಜಿಂಗ್‌ನ ಬಹು-ಶತಕೋಟಿ-ಡಾಲರ್ ವೆಚ್ಚದ ಬೆಲ್ಟ್ ಮತ್ತು ರೋಡ್ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ದಕ್ಷಿಣ ಮತ್ತು ಮಧ್ಯ ಏಷ್ಯಾವನ್ನು ಚೀನಾದ ರಾಜಧಾನಿಯೊಂದಿಗೆ ಸಂಪರ್ಕಿಸುತ್ತದೆ ಎಂದು ತಿಳಿಸಿದರು.
ಬೆಂಕಿಯ ಜ್ವಾಲೆಗಳು ಕಾರುಗಳನ್ನು ಆವರಿಸಿರುವುದು ಮತ್ತು ದಟ್ಟವಾದ ಹೊಗೆ ಬರುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಇದು ತೈಲ ಟ್ಯಾಂಕರ್ ಸ್ಫೋಟದಂತೆ ತೋರುತ್ತಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಈಸ್ಟ್ ಅಜ್ಫರ್ ಮಹೇಸರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಫೋಟದ ಸ್ವರೂಪ ಮತ್ತು ಕಾರಣಗಳನ್ನು ತಿಳಿದುಕೊಳ್ಳಲು ಸಮಯ ಬೇಕಾಗುತ್ತದೆ. ಗಾಯಗೊಂಡವರಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಹೇಳಿದರು.