ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ “ತೆರಿಗೆ ನೋಟಿಸ್” ಜಾರಿಗೆ ವಿರೋಧವಾಗಿ ರಾಜ್ಯದ ಸಣ್ಣ ವ್ಯಾಪಾರಿಗಳು ಜುಲೈ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಕರ್ನಾಟಕ ರಾಜ್ಯ ಕಾರ್ಮಿಕರ ಮಂಡಳಿ ನೇತೃತ್ವ ವಹಿಸಿರುವ ಈ ಚಳವಳಿಯಲ್ಲಿ, 2021ರ ಹಿಂದಿನ 20 ಲಕ್ಷ ರೂ.ದಿಂದ 50 ಲಕ್ಷ ರೂ.ಗಳವರೆಗೆ ತೆರಿಗೆ ನೋಟಿಸ್‌ಗಳನ್ನು ಪೂರ್ವಸೂಚನೆ ಇಲ್ಲದೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೇಕರಿಗಳು, ತರಕಾರಿ-ಹಣ್ಣು, ಹೂವು, ಮಾಂಸ ಹಾಗೂ ಚಹಾ ಅಂಗಡಿಗಳ ಮಾಲೀಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 23 ಮತ್ತು 24ರಂದು ವ್ಯಾಪಾರಿಗಳು ಕಪ್ಪು ಪಟ್ಟಿಗಳನ್ನು ಧರಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ. ಹಾಲು, ಕಾಫಿ, ಚಹಾ ಮಾರಾಟ ಸ್ಥಗಿತಗೊಳಿಸುವ ವಿಚಾರದ ಚಿಂತನೆಯೂ ನಡೆಯುತ್ತಿದೆ.
ಇದೇ ವೇಳೆ ಜುಲೈ 25ರಂದು ನಡೆಸುತ್ತಿರುವ ಬಂದ್‌ನಲ್ಲಿ ಎಲ್ಲಾ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಭಾಗವಹಿಸಲು ಮತ್ತು ರ್ಯಾಲಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿವೆ.