ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲೆಯ ತಾಲೂಕು ಕೇಂದ್ರಗಳಿAದ ಬೈಕ್ ರ‍್ಯಾಲಿ ಮೂಲಕ ಆಗಮಿಸಿದ ರೈತರು ನಗರದ ಪ್ರವಾಸಿಮಂದಿರದಲ್ಲಿ ಜಮಾಯಿಸಿದರು. ಅಲ್ಲಿಂದ ಡಿವಿಯೇಷನ್ ರಸ್ತೆ, ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಹನೂರು ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಪಂನಲ್ಲಿ ಮಳೆ ಇಲ್ಲದೇ ಅಂತರ್‌ಜಲ ಮಟ್ಟ ಕುಸಿದಿದೆ. ಆದ್ದರಿಂದ ಈ ಭಾಗದ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಲು ಕ್ರಮವಹಿಸಬೇಕು. ಉಡುತೊರೆಹಳ್ಳ ಜಲಾಶಯ, ಕೀರೆಪಾತಿ ಜಲಾಶಯ ಹಾಗೂ ಕೊಳ್ಳೇಗಾಲ ತಾಲೂಕಿನ ಕೋಟೆಕೆರೆಗೆಏತ ನೀರಾವರಿ ಮೂಲಕ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಾಕಿ ಉಳಿದಿರುವ ೧೧೦ ಕರೆಗಳಿಗೆ ಡಿಪಿಆರ್ ಆಗಿದ್ದು, ಶೀಘ್ರವೇ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕು. ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಸಿ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ರೈತರು ಕೃಷಿ ಮಾಡಲು ಸಾಗುವಳಿ ಚೀಟಿ ನೀಡಬೇಕು.
ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಸಾಗುವನಿ, ಬೀಟೆ ಮರಗಳನ್ನು ಕಟಾವು ಮಾಡಲು ಅನುಮತಿಯನ್ನು ಸರಳೀಕರಣಗೊಳಿಸಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಅನಧೀಕೃತ/ಅಧಿಕೃತ ಯೋಜನೆಯಲ್ಲಿ ಹಳೆಯ ಪದ್ಧತಿಯಂತೆಯೇ ವಿದ್ಯುತ್ ಸಂಪರ್ಕವನ್ನು ನೀಡಬೇಕು. ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ ಬಗೆಹರಿಸಬೇಕು.
ಬದನಗುಪ್ಪೆ ಮತ್ತು ಕೆಲ್ಲಂಬಳ್ಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನವಾಗಿರುವ ರೈತ ಕುಟುಂಬಗಳ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಬೇಕು. ಬ್ಯಾಂಕ್‌ಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ಪೂರ್ವ ಮುಂಗಾರು ಮತ್ತು ಹಿಂಗಾರಿನಲ್ಲಿ ಬಾರಿ ಗಾಳಿ ಮತ್ತು ಮಳೆಯಿಂದ ವಿವಿಧ ಬೆಳೆಗಳು ಜಿಲ್ಲೆಯಲ್ಲಿ ನಷ್ಟವಾಗಿದ್ದು, ತಕ್ಷಣ ರೈತರಿಗೆ ನಷ್ಟ ತುಂಬಿಕೊಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಬಡಗಲಪುರ ನಾಗೇಂದ್ರ, ಎ.ಎಂ.ಮಹೇಶ್ ಪ್ರಭು, ಶಿವಪುರ ಮಹದೇವಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.