ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಬೃಹತ್ ಹೋರಾಟಕ್ಕೆ ಸಾರಿಗೆ ನೌಕರರು ಸಿದ್ಧರಾಗಿದ್ದಾರೆ. ಜಂಟಿ ಕ್ರಿಯಾ ಸಮಿತಿಯು ಇದೇ ತಿಂಗಳ ಫೆಬ್ರವರಿ ೧೯ರಂದು ರಾಜ್ಯವ್ಯಾಪಿ ಬೃಹತ್ ಹೋರಾಟ ನಡೆಸಲು ದಿನಾಂಕ ನಿಗದಿ ಪಡಿಸಿದೆ.
ಸಾರಿಗೆ ನೌಕರರ ೩೮ ತಿಂಗಳ ಹಿಂಬಾಕಿ ಹಣ ಪಾವತಿ, ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಪತ್ರ ಬರೆದಿದೆ. ಸರ್ಕಾರ ಇನ್ನೂ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಲಾಗಿದೆ ಎಂದು ಸಮಿತಿ ತಿಳಿಸಿದೆ.
ಫೆಬ್ರವರಿ ೧೯ರಂದು ನಡೆಯಲಿರುವ ಹೋರಾಟದ ದಿನವೇ ಸಾರಿಗೆ ಬಂದ್ ಕುರಿತ ನಿರ್ಧಾರವೂ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ಸ್ಪಷ್ಟ ಭರವಸೆ ನೀಡದಿದ್ದರೆ, ಮುಂದಿನ ಹಂತವಾಗಿ ಸಾರಿಗೆ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ. ಈ ಹಿಂದೆ ಜನವರಿ ೨೯ರಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ಆದರೆ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಅವರ ನಿಧನದ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದೂಡಲಾಗಿತ್ತು. ಇದೀಗ ಫೆಬ್ರವರಿ ಮೂರನೇ ವಾರದಲ್ಲಿ ಮತ್ತೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ವ್ಯತ್ಯಯ ಉಂಟಾಗುವ ಆತಂಕವೂ ವ್ಯಕ್ತವಾಗಿದೆ.



