ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆದೇಶದ ಮೇರೆಗೆ ಮುಡಾ ವ್ಯಾಪ್ತಿಯ ಬಡಾವಣೆಗಳ ಒಳಚರಂಡಿ, ಕುಡಿಯುವ ನೀರು ಹಾಗೂ ಕೆರೆಗಳ ಅಭಿವೃದ್ಧಿ, ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದೆಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.

ಕೆ. ಮರೀಗೌಡರು ಮಂಗಳವಾರ ಮುಡಾ ಆಯುಕ್ತರಾದ ದಿನೇಶ್‌ಕುಮಾರ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಮುಡಾ ವ್ಯಾಪ್ತಿಗೆ ಬರುವ ಪೊಲೀಸ್ ಬಡಾವಣೆಯ ಕೆರೆ, ವರುಣಾ ಕೆರೆ, ಚಿಕ್ಕಹಳ್ಳಿಯ ಮಲೀನ ನೀರು, ವಸಂತನಗರ ವಾಟರ್ ಟ್ಯಾಂಕ್ ಹಾಗೂ ಮುಡಾ ಕಟ್ಟಡಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಮುಡಾ ವತಿಯಿಂದ ನಿರ್ಮಿಸಿರುವ ಕಟ್ಟಡಗಳು ಛತ್ರಗಳನ್ನು ಈಗಾಗಲೇ ಬಾಡಿಗೆಗೆ ನೀಡಲಾಗಿದೆ. ಈಗ ಹೊಸದಾಗಿ ಟೆಂಡರ್ ಮಾಡಿ ಪಿ.ಡಬ್ಲ್ಯೂ.ಡಿ. ದರದ ಪ್ರಕಾರ ಬಾಡಿಗೆ ನಿಗದಿ ಮಾಡಿದರೆ ಪ್ರಾಧಿಕಾರಕ್ಕೆ ಬರುವ ಆದಾಯ ೪ ಪಟ್ಟು ಹೆಚ್ಚುತ್ತದೆ. ಮೈಸೂರು ತಾಲ್ಲೂಕು ಕೆ. ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಮುಡಾ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಒಳಚರಂಡಿಗಳಿಗೆ ಸೇಫ್ಟಿ ಟ್ಯಾಂಕ್ ನಿರ್ಮಿಸಲು ಸೂಚಿಸಿದ ಹಿನ್ನಲೆಯಲ್ಲಿ ಇಂದು ಪೊಲೀಸ್ ಲೇಔಟ್‌ನಲ್ಲಿರುವ ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿದ್ದು ಈ ಕೆರೆಯು ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿದ್ದು ಕೆರೆಯನ್ನು ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡು ೧೨.೬೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ವರುಣಾ ಕೆರೆಗೆ ವಸಂತನಗರ, ನಾಡನಹಳ್ಳಿ, ಕೆ.ಬಿ.ಎಲ್. ಬಡಾವಣೆ, ಬುಗತಗಳ್ಳಿ, ಚಿಕ್ಕಹಳ್ಳಿ, ವಾಜಮಂಗಲ ಬಡಾವಣೆಗಳ ಒಳಚರಂಡಿಯ ಮಲೀನ ನೀರು ಹರಿದು ಬರುತ್ತಿರುವುದರಿಂದ ಇದನ್ನು ತಡೆಯಲು ೩೦.೮೮ ಕೋಟಿ ವೆಚ್ಚದಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಮುಡಾ ವ್ಯಾಪ್ತಿಯ ಬಡಾವಣೆಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇದೇ ತಿಂಗಳು ೨೬ರಂದು ಮುಖ್ಯಮಂತ್ರಿಗಳು ಮೈಸೂರಿನ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಡಾ ವ್ಯಾಪ್ತಿಗೆ ಬರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಡಾ ಆಯುಕ್ತರಾದ ದಿನೇಶ್‌ಕುಮಾರ್, ಕಾರ್ಯದರ್ಶಿ ಡಿ. ಶೇಖರ್, ಎಸ್.ಇ. ಧರಣೇಂದ್ರಪ್ಪ, ಎಇಇ ಯಾದವಗಿರಿ, ಪ್ರಶಾಂತ್, ಪರಮೇಶ್, ಬಿ. ರವಿ, ಪ್ರಕಾಶ್, ನಾಡನಹಳ್ಳಿ ರವಿ ಹಾಜರಿದ್ದರು.
