ಮೈಸೂರು: ಮನುಷ್ಯನ ಮನಸ್ಸನ್ನು ಪರಿವರ್ತನೆಗೊಳಿಸುವುದು ಹಾಗೂ ಕಲುಷಿತ ಮನಸ್ಸನ್ನು ಪರಿಶುದ್ಧಗೊಳಿಸುವ ಪ್ರಮುಖ ಅಸ್ತ್ರವೇ ಧ್ಯಾನ ಎಂದು ಕೆನರಾ ಬ್ಯಾಂಕ್ ನ ನಿವೃತ್ತ ನೌಕರರು ಹಾಗೂ ಕರ್ನಾಟಕ ಬುದ್ಧಧರ್ಮ ಸಮಿತಿಯ ಸಹ ಕಾರ್ಯದರ್ಶಿಯೂ ಆದ ಎಚ್.ಶಿವರಾಜು ಹೇಳಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ಆಯೋಜಿಸಿದ್ದ ಬುದ್ಧ ವಂದನಾ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಭಗವಾನ್ ಬುದ್ದರು ಮನಸ್ಸನ್ನು ಶೋಧಿಸಿ, ಸ್ವಯಂ ಅನುಭವ ಪಡೆದುಕೊಂಡು ಏಕಾಗ್ರತೆಯಿಂದ ಇರಬೇಕಾದರೆ ಧ್ಯಾನ ಅನಿವಾರ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹುಟ್ಟಿನಿಂದ ಸಾಯುವತನಕ ಮನುಷ್ಯ ಉಸಿರಾಡುತ್ತಾನೆ. ಈ ಉಸಿರನ್ನೇ ಆಧಾರವಾಗಿಟ್ಟು ಕೊಂಡು ಭಗವಾನ್ ಬುದ್ಧರು ಧ್ಯಾನವನ್ನು ಕಂಡುಹಿಡಿದ್ದಾರೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೊರತೆಗೆಯಲು ದ್ಯಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಬೆಳೆಯು ಸಂವೃದ್ಧಿ ಯಾಗಿ ಬೆಳೆಯಲು ಅದರ ಸುತ್ತಲೂ ಇರುವ ಕಳೆಯನ್ನು ಹೇಗೆ ಕಿತ್ತು ಹಾಕುತ್ತೇವೆಯೂ ಹಾಗೆಯೇ ಮನಸ್ಸಿನಲ್ಲಿ ತುಂಬಿಕೊಂಡಿರುವ ಲೋಭ, ಮೋಹ, ದ್ವೇಷ ಎಂಬ ಕಲ್ಮಶವನ್ನು ಧ್ಯಾನದ ಮೂಲಕ ಹೊರತೆಗೆಯಬೇಕಿದೆ ಎಂದರು.
ಮನುಷ್ಯನಿಗೆ ಏಕಾಗ್ರತೆ ಮುಖ್ಯ. ಪ್ರತಿಯೊಂದು ಕೆಲಸವನ್ನು ಏಕಾಂಗ್ರತೆಯಿoದ ಮಾಡಿದಾಗ ಮಾತ್ರ ಅದು ಪರಿಪೂರ್ಣಗೊಳ್ಳುತ್ತದೆ. ವರ್ತಮಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು. ಧ್ಯಾನದಿಂದ ಸಕಾರಾತ್ಮಕ ಆಲೋಚನೆ, ಸದೃಢ ಮನಸ್ಸನ್ನು ಕಂಡು ಕೊಳ್ಳಬಹುದು. ಕೆಟ್ಟ ಆಲೋಚನೆಗಳಿಂದ ದೂರವಾಗಿ ಮನಸ್ಸು ಶುದ್ಧಿಗೊಳ್ಳುತ್ತದೆ ಎಂದರು. ವಕೀಲರಾದ ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಎನ್.ಲಿಂಗಣ್ಣಯ್ಯ, ಶೇಖರ್, ಎಂ. ನಾಗಯ್ಯ, ಸಿ. ಗಂಗಾಧರ್, ಭರತ್ ರಾಜು, ಶಶಿ, ನಿಂಗಯ್ಯ, ಶ್ರೀಧರ್, ವಿಜಯ್, ವಿಶಾಲ್ ಹಾಜರಿದ್ದರು.