ಹುಣಸೂರು: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಜನಜಾಗೃತಿ ವೇದಿಕೆಯ ಪಾತ್ರ ಅನನ್ಯವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಹುಣಸೂರು ಕಚೇರಿಯಲ್ಲಿ ಮಂಗಳವಾರ ನಡೆದ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಜನಜಾಗೃತಿ ವೇದಿಕೆಯಿಂದ ನಡೆಸುವ ಮದ್ಯಾವರ್ಜನಾ ಶಿಬಿರ, ಶಾಲಾ ಕಾಲೇಜು ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತು ಮತ್ತು ತಂಬಾಕು ವಿರೋಧಿ ದಿನಾಚರಣೆ ದುಶ್ಯಾಟ ಮುಕ್ತ ಸಮಾಜ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾದ ಕಾರ್ಯಕ್ರಮ ಆಗಿದೆ. ಮದ್ಯಾವರ್ಜನಾ ಶಿಬಿರದ ಮೂಲಕ ಕುಡಿತ ಬಿಟ್ಟ ನವ ಜೀವನ ಸಮಿತಿ ಸದಸ್ಯರ ಬಲವರ್ಧನೆ ಮಾಡಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯೋಜನೆಯ ಜಿಲ್ಲಾ ನಿರ್ದೇಶಕ ಎಚ್. ಎಲ್ . ಮುರಳಿಧರ್ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ವೇದಿಕೆ ಮತ್ತು ಗ್ರಾಮಭಿವೃದ್ಧಿ ಯೋಜನೆಯು ಸಮುದಾಯದ ಜೊತೆಗೊಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ವರ್ಷ ಹುಣಸೂರು ತಾಲೂಕಿನಲ್ಲಿ ಒಂದು ಮದ್ಯಾವರ್ಜನಾ ಶಿಬಿರ, 30 ಪ್ರೌಢಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ದದ ಅರಿವು ಮೂಡಿಸುವ ಉದ್ದೇಶದಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳೊಂದಿಗೆ ಕಿರು ಚಿತ್ರ ಪ್ರದರ್ಶನ, ಸಮುದಾಯದ ಜನರಿಗೆ ಅರಿವು ಮೂಡಿಸಲು ಮಾದಕ ವಸ್ತು ವಿರೋಧಿ ಮತ್ತು ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ಈಗಾಗಲೇ ಮದ್ಯಾವರ್ಜನಾ ಶಿಬಿರದ ಮೂಲಕ ಕುಡಿತ ಬಿಟ್ಟ ಸದಸ್ಯರಿಗೆ ನವಜೀವನ ಉತ್ಸವ, ಮಾಸಿಕ ಸಭೆ, ಸ್ವ ಸಹಾಯ ಸಂಘಗಳ ರಚನೆ, ಸ್ವ ಉದ್ಯೋಗ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಬಿಳಿಕೆರೆ ಪ್ರಸನ್ನ, ಗದ್ದಿಗೆ ದೇವರಾಜು, ನೇರಳಕುಪ್ಪೆ
ಮಹದೇವ್, ಬನಿಕುಪ್ಪೆ ಉಮೇಶ್, ವಕೀಲೆ ಪವಿತ್ರ, ಯೋಜನಾಧಿಕಾರಿಗಳಾದ ನಾರಾಯಣಶೆಟ್ಟಿ, ಧನಂಜಯ ಬಿ, ಸೇರಿದಂತೆ ತಾಲೂಕಿನ ಮೇಲ್ವಿಚಾರಕರುಗಳು ಇದ್ದರು.