ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದಿಂದ ಸಾಲಿಗ್ರಾಮ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ಉಪಸ್ಥಿತಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡವು. ಕೆಲವು ವಿಚಾರಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಪೊಲೀಸರು ಸಿಡಿಮಿಡಿಗೊಂಡರು.
ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡದ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ನಿರ್ವಹಣೆ, ಸಿಸಿ ಕ್ಯಾಮೆರಾ ಇಲ್ಲದಿರುವುದು ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ದೂರುಗಳು ಬಂದವು. ಅಲ್ಲದೆ ಕೆರೆಗಳ ಒತ್ತುವರಿ, ಲೋಕೋಪಯೋಗಿ ರಸ್ತೆಗಳ ಅಸಮರ್ಪಕ ನಿರ್ವಹಣೆ ಸಂಬಂಧ ದೂರು ಸಲ್ಲಿಕೆಯಾದವು.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ಮಾಗಡಿ-ಸೋಮವಾರಪೇಟೆ ರಸ್ತೆ ವಿಸ್ತರಣೆ ಕಾಮಗಾರಿ ಅವ್ಯವಸ್ಥೆ, ಸರ್ವೇ ಇಲಾಖೆಯ ಲೋಪಗಳ ಕುರಿತು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರು. ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರವಿ, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಉಪತಹಸೀಲ್ದಾರ್ ಆರ್.ಎ.ಮಹೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಂರಾಜು, ತಾ.ಪಂ. ಇಒ ಕುಲದೀಪ್ ಇದ್ದರು.