Thursday, April 10, 2025
Google search engine

Homeರಾಜ್ಯಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್, 3 ಲಕ್ಷ ಜನರಿಗೆ ಉದ್ಯೋಗ: ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್, 3 ಲಕ್ಷ ಜನರಿಗೆ ಉದ್ಯೋಗ: ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್‌ ಸ್ಥಾಪಿಸಲಾಗುತ್ತಿದ್ದು, ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಡಿಸಿ ಕನೀಜ್ ಫಾತೀಮಾ ಮತ್ತು ಹಿರಿಯ ಅಧಿಕಾರಿಗಳ ಜೊತೆ ಬೆಂಗಳೂರಿನ ವಿಕಾಸ ಸೌಧದ ಕಚೇರಿಯಲ್ಲಿ ಸಚಿವರು ಸಭೆ ನಡೆಸಿದ್ದು, ಜವಳಿ ಪಾರ್ಕ್‌ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುವ ಕುರಿತು ಮಾತುಕತೆ ನಡೆಸಿದರು.

ಜವಳಿ ಪಾರ್ಕ್‌ಗೆ ಬೇಕಾದ ಅವಶ್ಯಕತೆಗೆ ಅನುಗುಣವಾಗಿ ಸುಮಾರು 16 ಎಂ.ಎಲ್.ಡಿ ನೀರಿನ ಅಗತ್ಯವಿದೆ. ಮದಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬ್ಯಾರೇಜ್‌ನಿಂದ ನೀರು ಪೂರೈಕೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದರು.

ಅಲ್ಲದೆ, ಜವಳಿ ಪಾರ್ಕ್‌ ಆವರಣದಲ್ಲಿ ಇರುವ ಕೆರೆಯನ್ನು ಪುನರ್ಜೀವಗೊಳಿಸುವುದು ಮತ್ತು ಆದಷ್ಟು ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಮುಖಾಂತರ ನೀರಿನ ಪರ್ಯಾಯ ವ್ಯವಸ್ಥೆಗಳನ್ನೂ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಜವಳಿ ಪಾರ್ಕ್‌ ಸಂಪರ್ಕಿಸುವ ರಸ್ತೆಗಳನ್ನು ದೀರ್ಘಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸುವಂತೆಯೂ ಸಚಿವರು ಸೂಚನೆ ನೀಡಿದರು.

ಜವಳಿ ಪಾರ್ಕ್‌ ಆವರಣದಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಬೇಕು. ಈ ಮೂಲಕ ವಿದ್ಯುತ್‌ ಬಳಕೆಯನ್ನು ಮಿತವ್ಯಯಗೊಳಿಸುವಂತೆ ಸಲಹೆ ನೀಡಿದರು.

ಇನ್ನು ಜವಳಿ ಪಾರ್ಕ್‌ಗೆ 180 ಮೆಗಾ ವ್ಯಾಟ್ ವಿದ್ಯುತ್ ಅಗತ್ಯವಿದ್ದು, ಇದರ ಸಂಪರ್ಕ ಸಂಬಂಧ 220 ಕೆ.ವಿ ಪವರ್‌ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಪಾರ್ಕ್‌ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ (ಜವಳಿ) ಇಲಾಖೆಯ ಕಾರ್ಯದರ್ಶಿ ವಿಪುಲ್ ಬನ್ಸಾಲ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ್ ಪಾಂಡೆ, ಜವಳಿ ಅಭಿವೃದ್ಧಿ ಆಯುಕ್ತ ಕೆ.ಜ್ಯೋತಿ ಮತ್ತಿತರರು ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular