ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಎದ್ದಿರುವ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದೇವೆ ಎಂದು ನೀರಾವರಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿದ್ದು, ಇದು ತಾಂತ್ರಿಕ ಸಮಿತಿಯಾಗಿದೆ. ಸದ್ಯ ಅವರು ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಬೇಕು. ಈ ಪರಿಸ್ಥಿತಿಯಲ್ಲಿ ಪ್ರಮುಖ ಪರಿಹಾರವೆಂದರೆ ಮೇಕೆದಾಟು ಯೋಜನೆ ಮಾತ್ರ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಿದ್ದರೆ ಇಂದು ಈ ಸಮಸ್ಯೆ ಹಾಗೂ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಕಳೆದ ವರ್ಷ ೪೦೦ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಮೇಕೆದಾಟು ಅಣೆಕಟ್ಟು ಮೂಲಕ ಹಿಡಿದಿಟ್ಟಿದ್ದರೆ ಸಮಸ್ಯೆಯೇ ಎದುರಾಗುತ್ತಿರಲಿಲ್ಲ ಎಂದರು.
ಮೇಕೆದಾಟು ಅಣೆಕಟ್ಟು ನೀರನ್ನು ನಾವು ನೀರಾವರಿಗೆ ಬಳಸಲು ಸಾಧ್ಯವಿಲ್ಲ. ಕೇವಲ ಕುಡಿಯುವ ನೀರಿಗೆ ಬಳಸಬಹುದು. ಮೇಕೆದಾಟು ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬೇಕು. ನಾವು ನಮ್ಮ ಅರ್ಜಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇವೆ. ಸುಪ್ರೀಂ ಕೋರ್ಟ್ ಗಮನಕ್ಕೂ ತರುತ್ತೇವೆ ಎಂದು ಹೇಳಿದರು.
ದೆಹಲಿ ಸರ್ಕಾರದ ಅರ್ಜಿ ತಿದ್ದುಪಡಿಗೆ ಸುಪ್ರೀಂ ಸಮ್ಮತಿ : ನವದೆಹಲಿ,ಆ.೨೫- ರಾಷ್ಟ್ರ ರಾಜಧಾನಿಯಲ್ಲಿನ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಸತ್ತು ಇತ್ತೀಚೆಗೆ ತೆರವುಗೊಳಿಸಿದ ಕಾನೂನನ್ನು ಪ್ರಶ್ನಿಸಿ ತನ್ನ ಅರ್ಜಿಯನ್ನು ತಿದ್ದುಪಡಿ ಮಾಡಲು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ. ದೆಹಲಿ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಅವರ ಸಲ್ಲಿಕೆಗಳನ್ನು ಸುಪ್ರೀಂ ಕೋರ್ಟ್ ಗಮನಿಸಿತು, ಈ ಮೊದಲು ಸುಗ್ರೀವಾಜ್ಞೆಗೆ ವಿರುದ್ಧವಾಗಿ ಸವಾಲು ಹಾಕಲಾಗಿತ್ತು, ಅದು ಈಗ ಸಂಸತ್ತಿನ ಅನುಮತಿಯ ನಂತರ ಕಾನೂನಾಗಿ ಮಾರ್ಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿಗೆ ತಿದ್ದುಪಡಿ ಮಾಡಲು ಅನುಮತಿ ನೀಡಿದ್ದು, ಕೇಂದ್ರವು ಇದಕ್ಕೆ ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂದು ಹೇಳಿದೆ. ತಿದ್ದುಪಡಿ ಮಾಡಿದ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠವು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.