ಮೈಸೂರು : ಶ್ರೀ ಶಾರದಾ ಪಬ್ಲಿಕ್ ಶಾಲೆಯ ನೂತನ ಎಸ್.ರಾಮನಾಥನ್ ಸ್ಮಾರಕ ಬ್ಲಾಕ್ ಅನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ವಿದ್ಯಾರ್ಥಿ ಸಾಧಕರಾಗಿ ರೂಪುಗೊಳ್ಳಬೇಕಾದರೆ, ಅದಕ್ಕೆ ಬೇಕಾದ ಮಾನಸಿಕತೆ ಸಿದ್ಧತೆ ಮಾಡಿಕೊಳ್ಳು ವುದು ಮುಖ್ಯವಾಗುತ್ತದೆ. ನಾನು ಗಮನಿಸಿದ ವಿದ್ಯಾರ್ಥಿಯೊಬ್ಬನಿಗೆ ಚಿಕ್ಕವಯಸ್ಸಿನಲ್ಲಿಯೇ ತಾಯಿ ತೀರಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಆತ ತನಗೆ ಬೋಧನೆ ಮಾಡುವ ಶಿಕ್ಷಕಿಯನ್ನೇ ತಾಯಿ ಎಂದು ಭಾವಿಸಿ ವಿದ್ಯಾರ್ಜನೆ ಮಾಡುತ್ತಾನೆ. ಶಿಕ್ಷಕಿಯ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲನೆ ಮಾಡಿದ ವಿದ್ಯಾರ್ಥಿ ದೊಡ್ಡ ಸಾಧನೆ ಮಾಡುತ್ತಾನೆ. ಅಲ್ಲದೇ ತನ್ನ ವಿವಾಹಕ್ಕೆ ತನಗೆ ಅಕ್ಷರ ಕಲಿಸಿದ ಗುರುವನ್ನು ವಿಮಾನದಲ್ಲಿ ಕರೆಸಿಕೊಳ್ಳುತ್ತಾನೆ. ತನ್ಮೂಲಕ ಗುರುಗಳಿಗೆ ಅಗ್ರ ಸ್ಥಾನವನ್ನು ನೀಡಿ ಆರಾಧಿಸುತ್ತಾನೆ. ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರ ಬಗ್ಗೆ ಅತೀವವಾದ ಗೌರವ ಇಟ್ಟುಕೊಳ್ಳಬೇಕು. ಅಲ್ಲದೇ ಅವರು ಹೇಳಿದ್ದನ್ನು ಪರಿಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಶಾರದಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿಶೇಷವಾಗಿ ನಮ್ಮ ಹಿಂದೂ ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ತನ್ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೇ, ನಮ್ಮ ಆಚಾರ-ವಿಚಾರ, ಸಂಸ್ಕಾರವನ್ನು ಉಳಿಸಿಕೊಂಡು ಮುಂದುವರಿಸಲು ಕೊಡುಗೆ ನೀಡುತ್ತಿದ್ದಾರೆ. ಈ ಪರಿಪಾಠ ಎಲ್ಲ ಕಡೆ ಅನುಸರಣೆಯಾಗಬೇಕು, ಎಂದು ಸಲಹೆ ನೀಡಿದರು.
ಶಾಲಾ ಕಾರ್ಯದರ್ಶಿ ಮಂಜುನಾಥ್ ರಾಮನಾಥನ್ ಮಾತನಾಡಿ, ಶಾಲೆಯ ಮೂಲ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯಾಧುನಿಕ ಕಲಿಕಾ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಎಸ್.ರಾಮನಾಥನ್ ಸ್ಮಾರಕ ಬ್ಲಾಕ್ ನಿರ್ಮಿಸಲಾಗಿದೆ. ಇದರಿಂದ ಶಿಶುವಿಹಾರ ಮಕ್ಕಳು, ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ,’’ ಎಂದು ಮಾಹಿತಿ ನೀಡಿದರು.
ತಂದೆ ರಾಮನಾಥನ್ ಅವರು 15 ಮಕ್ಕಳಿಂದ ಆರಂಭಿಸಿದ ಈ ಶಾಲೆಯು ಇಂದು 800 ವಿದ್ಯಾರ್ಥಿಗಳು ಅಧ್ಯಯನ ಮಾಡುವಷ್ಟು ಹೆಮ್ಮರವಾಗಿ ಬೆಳೆದಿದೆ. ಅವರು ಹೇಳಿಕೊಟ್ಟ ಮಾರ್ಗದಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ,’’ ಎಂದು ಟ್ರಸ್ಟಿ ಶ್ರೀವತ್ಸ ರಾಮನಾಥನ್ ಸ್ಮರಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಶಾರದಾ ಪಬ್ಲಿಕ್ ಶಾಲೆಯ ಮಕ್ಕಳಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಖಜಾಂಚಿ ಕುಸುಮಾ ರಾಮನಾಥನ್, ಆಡಳಿತಾಧಿಕಾರಿ ಗುರುರಾಜ್, ಪ್ರಾಂಶುಪಾಲರಾದ ಶಾಲಿನಿ ಅಶೋಕ್ ಹಾಗೂ ಇತರರು ಇದ್ದರು.
ಎಳೆಯ ವಯಸ್ಸಿನ ಮಕ್ಕಳಲ್ಲಿ ಬದ್ದತೆ ತುಂಬುವುದು ಸವಾಲಿನ ಕೆಲಸ. ಅದು ನೈಜ ಶಿಕ್ಷಕನಿಂದ ಮಾತ್ರ ಸಾಧ್ಯ. ಅಲ್ಲದೇ ಅದಕ್ಕೆ ವಿದ್ಯಾರ್ಥಿಯ ಸಹಕಾರವೂ ಮುಖ್ಯವಾಗುತ್ತದೆ. ಶಾರದಾ ಪಬ್ಲಿಕ್ ಶಾಲೆಯಿಂದ ಇದು ಸಾಧ್ಯವಾಗಿದೆ.
-ಅರವಿಂದ್ ಕುರ್ಮಾ, ಸುಪ್ರೀಂ ಕೋರ್ಟ್ ನ್ಯಾಯಾಧೀಶ