ಮೈಸೂರು : ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ಅನಾನುಕೂಲವಾಗಿದ್ದ ಎಂಜಿ ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತರಕಾರಿ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಕೆಲವು ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಇಲ್ಲಿ ಗ್ರಾಹಕರು ತಮ್ಮ ವಾಹನ ನಿಲ್ಲಿಸಲೂ ಸಹ ಸ್ಥಳಾವಕಾಶ ಇಲ್ಲದೆ, ಅನಿವಾರ್ಯವಾಗಿ ರಸ್ತೆಯ ಮತ್ತೊಂದು ಬದಿಯಲ್ಲಿ ಕಾರು, ಸ್ಕೂಟರ್, ಟೆಂಪೋ ಮತ್ತು ಆಟೋಗಳನ್ನು ನಿಲ್ಲಿಸಬೇಕಿತ್ತು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಇದನ್ನು ಮನಗಂಡ ಸಿದ್ಧಾರ್ಥನಗರ ಟ್ರಾಫಿಕ್ ಇನ್ಸ್‌ಪೆಕ್ಟರ್ ಶ್ರೀಧರ್ ತಮ್ಮ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಸದ್ಯ ಇಲ್ಲಿ ನೂರಾರು ದನಗಳು ರಸ್ತೆಯಲ್ಲಿ ಬೀಡು ಬಿಡುತ್ತಿವೆ. ಇದನ್ನೂ ಸಹ ತೆರವುಗೊಳಿಸಬೇಕು. ದನಗಳ ಮಾಲಿಕರಿಗೆ ಸೂಚನೆ ನೀಡಿ, ನಿಗದಿತ ಅವಧಿಯೊಳಗೆ ತಮ್ಮ ತಮ್ಮ ಪಶುಗಳನ್ನು ಹಿಡಿದು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿ ಅದಕ್ಕೆ ಪ್ರತಿಕ್ರಿಯೆ ಬಾರದಿದ್ದಲ್ಲಿ ಎಲ್ಲ ದನಗಳನ್ನು ಹಿಡಿದು ಪಿಂಜ್ರಾಪೋಲ್‌ಗೆ ಸಾಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.