ಪಾಂಡವಪುರ : ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತಾಳಶಾಸನ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷಿಕ ನಾಗರಾಜು ಅವರ ಪತ್ನಿ ರತ್ನಮ್ಮ (೫೩) ಮೃತ ದುದೈವಿ. ಮೃತ ರತ್ನಮ್ಮ ಅವರು ಪಾಂಡವಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಧನ ಬ್ಯಾಂಕ್, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡಿದ್ದರು. ಈ ಪೈಕಿ ಬಂಧನ ಬ್ಯಾಂಕ್ ಮತ್ತು ಧರ್ಮಸ್ಥಳ ಸಂಘದ ಸಾಲ ವಸೂಲಿದಾರರ ಕಿರುಕುಳ ಹೆಚ್ಚಾಗಿ ಈಕೆ ಬೆಳಗ್ಗೆ ೯.೩೦ಕ್ಕೆ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರತ್ನಮ್ಮ ಅವರಿಗೆ ಪತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದು ನಂತರ ಮೃತದೇಹ ಕುಟುಂಬದವರಿಗೆ ನೀಡಲಾಯಿತು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.