ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯದ ಗಹನವಾದ ಸಂಬಂಧವಿದೆ. ಮಾನಸಿಕ ಒತ್ತಡವು ಹೆಚ್ಚಾದರೆ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಅದೇ ರೀತಿ, ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಆತಂಕ (Anxiety) ಮತ್ತು ಖಿನ್ನತೆ (Depression) ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹಾಗಾದರೆ ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧ ಹಾಗೂ ಇದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಯೋಣ.
ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯದ ಕನೆಕ್ಷನ್
ಮೈಗ್ರೇನ್ ಮತ್ತು ಖಿನ್ನತೆ ಎರಡೂ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವ ಕಾಯಿಲೆಗಳಾಗಿವೆ. ಕುಟುಂಬದಲ್ಲಿ ಮೈಗ್ರೇನ್ ಅಥವಾ ಮಾನಸಿಕ ಕಾಯಿಲೆಯ ಇತಿಹಾಸ, ಸುತ್ತಮುತ್ತಲಿನ ವಾತಾವರಣ, ಸೆರೊಟೋನಿನ್ ಮಟ್ಟದಲ್ಲಿನ ವ್ಯತ್ಯಾಸ ಮತ್ತು ಹಾರ್ಮೋನುಗಳ ಏರಿಳಿತಗಳು (ವಿಶೇಷವಾಗಿ ಈಸ್ಟ್ರೊಜೆನ್) ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಸಂಬಂಧವಿದೆ.

ಮೈಗ್ರೇನ್ ನಿಂದಾಗಿ ಸತತ ತಲೆನೋವು, ನಿದ್ರೆಯಿಲ್ಲದ ರಾತ್ರಿಗಳು, ಏಕಾಗ್ರತೆಯ ಕೊರತೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಿರುವ ಲಕ್ಷಣಗಳು ಕಂಡುಬರುತ್ತವೆ. ಇದು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಲಕ್ಷಣಗಳು :
ಪದೇ ಪದೇ ಬರುವ ತಲೆನೋವಿನಿಂದ ಒತ್ತಡ ಹೆಚ್ಚಾಗುತ್ತದೆ.
ಒತ್ತಡ ಹೆಚ್ಚಾದಂತೆ ಆತಂಕ ಮತ್ತು ಖಿನ್ನತೆ ಆವರಿಸುತ್ತದೆ.
ಖಿನ್ನತೆಯಿಂದಾಗಿ ನಿರಾಸೆ ಮೂಡುತ್ತದೆ, ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಮತ್ತು ಆತ್ಮವಿಶ್ವಾಸ ಕುಗ್ಗುತ್ತದೆ.
ಈ ಪರಿಸ್ಥಿತಿಯು ಮೈಗ್ರೇನ್ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
ಮಾನಸಿಕ ಆರೋಗ್ಯದ ಮೇಲೆ ಮೈಗ್ರೇನ್ ಪ್ರಭಾವ
ಮೈಗ್ರೇನ್ ಕೇವಲ ಒಂದು ಸಾಧಾರಣ ತಲೆನೋವಲ್ಲ, ಇದು ವ್ಯಕ್ತಿಯ ಕಾರ್ಯಕ್ಷಮತೆಯನ್ನೇ ಕುಂದಿಸುವ ನರಸಂಬಂಧಿ ಸ್ಥಿತಿಯಾಗಿದೆ. ಇದರ ಪ್ರಭಾವ ಕೇವಲ ತಲೆಗೆ ಮಾತ್ರ ಸೀಮಿತವಾಗಿರದೆ, ವ್ಯಕ್ತಿಯಲ್ಲಿ ಆತ್ಮವಿಶ್ವಾಸದ ಕೊರತೆ, ಏಕಾಂಗಿತನ ಮತ್ತು ಜನರೊಡನೆ ಬೆರೆಯಲು ಹಿಂಜರಿಕೆಯನ್ನು ಉಂಟುಮಾಡುತ್ತದೆ.
ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತಿರುವ ಲಕ್ಷಣಗಳು ಹೀಗಿರುತ್ತವೆ :
ಸತತವಾಗಿ ಕಾಡುವ ತೀವ್ರ ತಲೆನೋವು.
ವಾಕರಿಕೆ ಅಥವಾ ವಾಂತಿ.
ದೌರ್ಬಲ್ಯ ಅಥವಾ ತಲೆಸುತ್ತು.
ಬೆಳಕು ಮತ್ತು ಶಬ್ದಕ್ಕೆ ಕಿರಿಕಿರಿ.
ಸದಾಕಾಲ ಉದಾಸೀನ ಅಥವಾ ದುಃಖಿತರಾಗಿರುವುದು.
ನಕಾರಾತ್ಮಕ ಆಲೋಚನೆಗಳ ಹೆಚ್ಚಳ.
ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅಸಾಧ್ಯವಾಗುವುದು.
ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ.
ಮೈಗ್ರೇನ್ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳುವ ಮಾರ್ಗಗಳು :
ಒತ್ತಡವೇ ಈ ಎರಡೂ ಸಮಸ್ಯೆಗಳಿಗೆ ಮುಖ್ಯ ಕಾರಣ. ಆದ್ದರಿಂದ ಮನಸ್ಸನ್ನು ಸಂತೋಷವಾಗಿಟ್ಟು ಕೊಳ್ಳುವುದು ಬಹಳ ಮುಖ್ಯ. ಸ್ನೇಹಿತರನ್ನು ಭೇಟಿ ಮಾಡುವುದು, ಪ್ರವಾಸ ಹೋಗುವುದು ಮತ್ತು ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ಉಲ್ಲಾಸವಾಗಿಡಬಹುದು.
ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ :

ಪೌಷ್ಠಿಕ ಆಹಾರ : ಸಮತೋಲಿತ ಮತ್ತು ಆರೋಗ್ಯಕರ ಆಹಾರ ಸೇವಿಸಿ.
ನಿಯಮಿತ ವ್ಯಾಯಾಮ : ದೈಹಿಕ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.
ನಿದ್ರೆಯ ಕ್ರಮ : ಸರಿಯಾದ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ.
ಯೋಗ ಮತ್ತು ಧ್ಯಾನ : ಪ್ರಾಣಾಯಾಮ ಮತ್ತು ಮೆಡಿಟೇಶನ್ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ತಜ್ಞರ ಸಲಹೆ: ಸಮಸ್ಯೆ ತೀವ್ರವಾಗಿದ್ದರೆ ತಡಮಾಡದೆ ವೈದ್ಯರ ಅಥವಾ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ.
ನೆನಪಿಡಿ : ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯ ಪರಸ್ಪರ ಅವಲಂಬಿತವಾಗಿವೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಮೈಗ್ರೇನ್ ಮತ್ತು ಮಾನಸಿಕ ಒತ್ತಡ ಎರಡನ್ನೂ ಗೆಲ್ಲಬಹುದು



