ಬೆಕ್ಕನ್ನು ಸಾಕಲು ಪ್ರೇರೇಪಿಸಲು ಅಂತರಾಷ್ಟ್ರೀಯ ಪ್ರಾಣಿ ನಿಧಿಯು ವಿಶೇಷ ಅಭಿಯಾನದೊಂದಿಗೆ ಆಗಸ್ಟ್ 8 ರಂದು ಅಂತರಾಷ್ಟ್ರೀಯ ಬೆಕ್ಕು ದಿನವೆಂದು ಆಚರಿಸಲಾಗುತ್ತಿದೆ.
ಚಾಮರಾಜನಗರ: ಸಾಕು ಪ್ರಾಣಿಗಳಿಂದ ಮಾನವನ ಒತ್ತಡ ಕಡಿಮೆಯಾಗುತ್ತದೆ. ಪ್ರಾಣಿಗಳ ಆಟ, ಚಲನವಲನಗಳಿಂದ ಮನಸ್ಸು ಹಗುರವಾಗಿ , ಆನಂದ, ಸಂತೋಷ ತುಂಬುತ್ತದೆ. ಬೆಕ್ಕನ್ನು ಪ್ರೀತಿಸೋಣ ಅಪನಂಬಿಕೆಯನ್ನು ತ್ಯಜಿಸೋಣ. ಬೆಕ್ಕನ್ನು ಸಾಕಲು ಪ್ರೇರೇಪಿಸಲು ಅಂತರಾಷ್ಟ್ರೀಯ ಪ್ರಾಣಿ ನಿಧಿಯು ವಿಶೇಷ ಅಭಿಯಾನದೊಂದಿಗೆ ಆಗಸ್ಟ್ 8 ರಂದು ಅಂತರಾಷ್ಟ್ರೀಯ ಬೆಕ್ಕು ದಿನವೆಂದು ಆಚರಿಸಲಾಗುತ್ತಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಬೆಕ್ಕು ದಿನದಲ್ಲಿ ಬೆಕ್ಕಿನ ಮರಿಗಳನ್ನು ಪ್ರೀತಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಈಜಿಪ್ಟ್ ನಾಗರೀಕತೆಯಲ್ಲಿ ಬೆಕ್ಕನ್ನು ಪೂಜಿಸುವ ಪದ್ಧತಿ ಇತ್ತು . ಬೆಕ್ಕಿಗೆ ಬೇಟೆಯಾಡುವ ಮಹತ್ವದ ಶಕ್ತಿ ಇದೆ. ಪ್ರಾಣಿ ಪ್ರಿಯರಿಗೆ ಬೆಕ್ಕು ಮುದ್ದಿನ ಪ್ರೀತಿಯ ಪ್ರಾಣಿಯಾಗಿದೆ. ಬೆಕ್ಕಿಗೆ ಕಿವಿ ಚುರುಕಾಗಿದ್ದು ಅದರ ಪಿಲಿಪಿಲಿ ಕಣ್ಣುಗಳ ನೋಟ, ಕೈಕಾಲುಗಳನ್ನು ಹಿಡಿಯುವುದು ಮಕ್ಕಳಿಗೆ ಹಾಗೂ ಪ್ರಾಣಿ ಪ್ರಿಯರಿಗೆ ತುಂಬಾ ಖುಷಿಯನ್ನು ಸಂತೋಷವನ್ನು ಉಂಟುಮಾಡುತ್ತದೆ.
ಬೆಕ್ಕಿನ ಬಗ್ಗೆ ಅನೇಕ ಅಪನಂಬಿಕೆಗಳಿದ್ದು ಅವೆಲ್ಲವನ್ನು ದೂರ ಮಾಡೋಣ. ಸದ್ಭಾವನೆಯನ್ನು ಬೆಳೆಸಿಕೊಳ್ಳೋಣ. ಪ್ರಾಣಿಗಳನ್ನು ಸಾಕುವ, ಪ್ರೀತಿಸುವ ಮೂಲಕ ಸ್ನೇಹ ಮಾಯಿಯಾಗೋಣ .
ಮೈಸೂರು ಪ್ರಾಂತ್ಯದಲ್ಲಿ ಬೆಕ್ಕಿಗೆ ಕೊತ್ತಿ ಎಂದು ಕರೆಯುತ್ತಾರೆ. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ಎಂಬ ಜನಪ್ರಿಯ ನಾಣ್ಣುಡಿ ಇದೆ. ಪರಿಸರ ಸಂರಕ್ಷಣೆಗಾಗಿ ಪ್ರಾಣಿಗಳನ್ನು ಸಾಕುವ ಮತ್ತು ಪ್ರೀತಿಸುವ ಗುಣ ನಮ್ಮದಾಗಲಿ ಎಂದರು.

ಋಗ್ವೇದೀ ಯೂತ್ ಕ್ಲಬ್ ನಿರ್ದೇಶಕರಾದ ಸಾನಿಕ ಮಾತನಾಡಿ ಸಾಕು ಪ್ರಾಣಿಗಳು ಮಕ್ಕಳಿಗೆ ಬಹಳ ಸಂತೋಷ, ಖುಷಿಯನ್ನು ನೀಡುತ್ತದೆ. ಆದರೆ ಸಾಕುವ ಪ್ರಾಣಿಗಳಿಂದ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕಾದ್ದು ಬಹಳ ಮುಖ್ಯ ಎಂದರು.
ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಮಾತನಾಡಿ ಅಂತರಾಷ್ಟ್ರೀಯ ಬೆಕ್ಕಿನ ದಿನ ವಿಶೇಷವಾಗಿ ಮೊದಲ ಬಾರಿಗೆ ಆಚರಿಸಲಾಗುತ್ತಿದೆ. ಬೆಕ್ಕು ಉತ್ತಮ ಸ್ನೇಹಿತನಂತೆ. ಬೆಕ್ಕು ಬಹಳ ಮುದ್ದಾಗಿರುವ ಪ್ರಾಣಿ. ಬೆಕ್ಕು ಅತ್ಯಂತ ಪ್ರೀತಿಯ ಪ್ರಾಣಿ. ಬೆಕ್ಕನ್ನ ಸಾಕುವ ಮತ್ತು ಅದರ ನಿರ್ವಹಣೆಯ ಕಲೆಯನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕು ಎಂದರು. ಚಿತ್ರಕಲಾವಿದರಾದ ರವಿ, ಮಕ್ಕಳ ಪರಿಷತ್ತಿನ ಶ್ರೇಯಸ್, ಮಂಜು ಕೀರ್ತಿ ಉಪಸ್ಥಿತರಿದ್ದರು.