Friday, April 4, 2025
Google search engine

Homeರಾಜ್ಯ9 ಕಳಪೆ ಇಂಜೆಕ್ಷನ್ ಔಷಧಿಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸಚಿವ ದಿನೇಶ್‌...

9 ಕಳಪೆ ಇಂಜೆಕ್ಷನ್ ಔಷಧಿಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸಚಿವ ದಿನೇಶ್‌ ಗುಂಡೂರಾವ್ ಪತ್ರ

ಬೆಂಗಳೂರು: ಇತರ ರಾಜ್ಯಗಳಲ್ಲಿ ತಯಾರಾದ ಒಂಬತ್ತು ಇಂಜೆಕ್ಷನ್ ಔಷಧಿಗಳು ಕರ್ನಾಟಕ ಸರ್ಕಾರದ ಪ್ರಯೋಗಾಲಯಗಳಲ್ಲಿ ನಡೆಸಲಾದ ಸ್ಟೆರಿಲಿಟಿ ಟೆಸ್ಟ್​ನಲ್ಲಿ ವಿಫಲವಾಗಿವೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ಔಷಧಿಗಳನ್ನು ಇನ್ನು ಮುಂದೆ ಕರ್ನಾಟಕದಲ್ಲಿ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಬರುಯಿಪುರದ ಫಾರ್ಮಾ ಇಂಪೆಕ್ಸ್ ಲ್ಯಾಬೊರೇಟರೀಸ್ ತಯಾರಿಸಿದ ಮೆಟ್ರೋನಿಡಜೋಲ್ ಇಂಜೆಕ್ಷನ್; ಇಂದೋರ್‌(ಎಂಪಿ) ಆಲ್ಫಾ ಲ್ಯಾಬೊರೇಟರೀಸ್ ತಯಾರಿಸಿದ ಡಿಕ್ಲೋಫೆನಾಕ್ ಸೋಡಿಯಂ ಇಂಜೆಕ್ಷನ್; ಇಂದೋರ್‌(ಎಂಪಿ) ರುಸೋಮಾ ಲ್ಯಾಬೊರೇಟರೀಸ್‌ ತಯಾರಿಸಿದ ಡೆಕ್ಸ್ಟ್ರೋಸ್ ಇಂಜೆಕ್ಷನ್ ಸೇರಿದಂತೆ ಸಂತಾನಹೀನತೆ ಪರೀಕ್ಷೆಯಲ್ಲಿ ವಿಫಲವಾದ 9 ಇಂಜೆಕ್ಷನ್ ಔಷಧಿಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸೆಂಟ್ರಲ್ ಡ್ರಗ್ಸ್ ಸ್ಯ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಪ್ರಯೋಗಾಲಯದಲ್ಲಿ ಈ 9 ಔಷಧ ಕಂಪನಿಗಳು ಉತ್ಪಾದಿಸುವ ಡ್ರಗ್​​​ಗಳನ್ನು ಟೆಸ್ಟ್ ಮಾಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟವನ್ನು ನಿರ್ಬಂಧಿಸಬೇಕು. ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ, ಅವುಗಳನ್ನು ವಾಪಸ್​​ ಪಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ಇತರ ರಾಜ್ಯಗಳಲ್ಲಿ ತಯಾರಾಗುವ ಕಲುಷಿತ ಇಂಜೆಕ್ಷನ್ ಔಷಧಿಗಳು ಕರ್ನಾಟಕದೊಳಗೆ ಪದೇ ಪದೇ ಮಾರಾಟವಾಗುತ್ತಿರುವ ಪ್ರಕರಣಗಳ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಈ ಪತ್ರ ಬರೆಯುತ್ತಿದ್ದೇನೆ” ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಈಗಾಗಲೇ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಔಷಧಿಯನ್ನು ಬಳಸಿದ್ದ ಪರಿಣಾಮ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ತಾಯಂದಿರು ಮೃತಪಟ್ಟಿದ್ದಾರೆ. ಮುಂದೆ ಇಂತಹ ಘಟನೆಗಳಾಗದಂತೆ ತಡೆಗಟ್ಟುವ ಮುನ್ನೆಚ್ಷರಿಕೆಯಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದು, ಈ ಔಷಧಿಗಳು ರಾಜ್ಯದಲ್ಲಿ ಮಾರಾಟವಾಗದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಸಮಯದಲ್ಲಿ ಇತರ ಕಂಪನಿಗಳು ತಯಾರಿಸಿದ ಬಳಕೆಗೆ ಯೋಗ್ಯವಲ್ಲದ ಔಷಧಿಗಳ ಮಾರಾಟವನ್ನು ನಾವು ಸಹಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಮಾರಾಟ ಮಾಡುವ ಎಲ್ಲಾ ಉತ್ಪನ್ನಗಳನ್ನು ದೇಶದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು. ಜೊತೆಗೆ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಔಷಧಿಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರಯೋಗಾಲಯಗಳಿಗೆ ವ್ಯವಸ್ಥೆ ರಚಿಸಬೇಕು ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನಡೆಸಿದ ಲ್ಯಾಬ್ ಟೆಸ್ಟಿಂಗ್​​ನಲ್ಲಿ ರೋಗಿಗಳಿಗೆ ಔಷಧ ನೀಡಲು ಹಾನಿಕಾರಕವೆನಿಸಿದ 9 ಕಂಪನಿಗಳ ಹೆಸರು, ವಿಳಾಸ, ಔಷಧ ಉತ್ಪಾದನೆ ಬಗ್ಗೆ ಪತ್ರದಲ್ಲಿ ಸಂಪೂರ್ಣ ವಿವರವನ್ನು ಪ್ರಸ್ತಾಪಿಸಿ, ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

RELATED ARTICLES
- Advertisment -
Google search engine

Most Popular