ಮಂಗಳೂರು: ಮಂಗಳೂರಿನ ಮಳೆ ಹಾನಿ ಪೀಡಿತ ಪ್ರದೇಶಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಭೂ ಮಾಫಿಯಾದ ವಾಸನೆ ಇದೆ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುತ್ತಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಪಾಯದ ಅಂಚಿನಲ್ಲಿರುವ ಕೆತ್ತಿಕಲ್ ರಾ.ಹೆದ್ದಾರಿಯಲ್ಲಿ ಗುಡ್ಡವನ್ನು ಶುಕ್ರವಾರ ಬೆಳಗ್ಗೆ ವೀಕ್ಷಣೆ ಮಾಡಿದ ಬಳಿಕ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಕೆತ್ತಿಕಲ್ ನಲ್ಲಿ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು.
ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ಯಾಕೆ ನೀಡಿದೆ ಎಂದು ವರದಿ ಕೇಳುತ್ತೇನೆ ಎಂದು ಸಚಿವರು ತಿಳಿಸಿದರು.
ನೋಡಿದ್ರೆ ಭಯ ಆಗುತ್ತದೆ. ಇದನ್ನು ತಡೆಯೋದು ಹೇಗೆ ಎಂದು ಜಿಲ್ಲಾ ಉಸ್ತವಾರಿ ಸಚಿವ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಸಚಿವರು ಅಲ್ಲಿನ ಭೀಕರತೆ ಕಂಡು ದಂಗಾದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಮಹಾನಗರ ಪಾಲಿಕೆ, ಭೂ ವಿಜ್ಞಾನ ಇಲಾಖೆ, ಕೆಪಿಟಿಸಿಎಲ್ ಸೇರಿ ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೈದ ಸಚಿವ ಗುಂಡೂರಾವ್ ಇಲ್ಲಿ ಮುಂದೆ ಅನಾಹುತ ಆಗದಂತೆ ತಕ್ಷಣ ಕ್ರಮ ವಹಿಸಿ ಎಂದು ಎಚ್ಚರಿಸಿದರು.
ಮೇಲ್ನೋಟಕ್ಕೆ ಕೆತ್ತಿಕಲ್ ನಲ್ಲಿ ಗುಡ್ಡದ ಭಯಾನಕ ಸ್ಥಿತಿ, ಹಾನಿಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಲೇ ಶೇ.90ರಷ್ಟು ಹಾನಿ ಆಗಿರುವುದು ಕಂಡು ಬರುತ್ತಿದೆ. ತಜ್ಞರ ತಂಡ ಅಧ್ಯಯನ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.