Thursday, May 8, 2025
Google search engine

Homeರಾಜ್ಯಅನಗತ್ಯವಾಗಿ ಮರ ಕಡಿಯಲು ಅನುಮತಿ ನೀಡದಂತೆ ಸಚಿವ ಈಶ್ವರ ಖಂಡ್ರೆ ಸೂಚನೆ

ಅನಗತ್ಯವಾಗಿ ಮರ ಕಡಿಯಲು ಅನುಮತಿ ನೀಡದಂತೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರಿ ಭೂಮಿ, ಅರಣ್ಯ, ರಸ್ತೆ ಬದಿಯಲ್ಲಿನ ಮರಗಳನ್ನು ಅಕ್ರಮವಾಗಿ ಕಡಿಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮತ್ತು ಹೆಚ್ಚಿನ ದಂಡ ಹಾಕಲು ವೃಕ್ಷ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಅರಣ್ಯ ಭವನದಲ್ಲಿಂದು ಕೆ.ಡಿ.ಪಿ ಮತ್ತು ಎಂ.ಎಂ.ಆರ್.‌ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಸುಪ್ರೀಂಕೋರ್ಟ್‌ ಸಹ ಹೆಚ್ಚಿನ ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪ್ರಸಕ್ತ ಸನ್ನಿವೇಶದಲ್ಲಿ ವೃಕ್ಷ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅಭಿವೃದ್ಧಿಯ ಹೆಸರಲ್ಲಿ ನೂರಾರು ಮರಗಳ ಕಡಿತಲೆಗೆ ಅನುಮತಿ ನೀಡುತ್ತಿರುವ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಮರ ಕಡಿಯಲು ಅನುಮತಿ ನೀಡಬಾರದು ಎಂದು ಸೂಚನೆ ನೀಡಿದರು.

2015ರ ಪೂರ್ವದಲ್ಲಿ ಪಟ್ಟಾ ಜಮೀನು ಮತ್ತು ಒತ್ತುವರಿ ಸೇರಿ 3 ಎಕರೆಗಿಂತ ಕಡಿಮೆ ಇರುವ ಬಡ ಜನರಿಗೆ ಪುನರ್ವಸತಿ ಕಲ್ಪಿಸುವವರೆಗೆ ತೊಂದರೆ ನೀಡದೆ, ದೊಡ್ಡ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲು ನಿರ್ದೇಶನ ನೀಡಿ ಅರಣ್ಯ ಭೂಮಿಯ ಇಂಡೀಕರಣಕ್ಕೆ ಪತ್ರ ಬರೆಯುವ ಬದಲು ಎ.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

2015ರ ನಂತರದ ಒತ್ತುವರಿಯ ವಿಚಾರದಲ್ಲಿ ಶೂನ್ಯ ಸಹಿಷ್ಣತೆ ಇರಬೇಕು, ಯಾರೇ 2015ರ ನಂತರ ಅರಣ್ಯ ಒತ್ತುವರಿ ಮಾಡಿದ್ದರೆ, ಮುಲಾಜಿಲ್ಲದೆ ತೆರವು ಮಾಡಿ ಕ್ರಮ ಜರುಗಿಸಬೇಕು, ಕಳೆದ 2 ವರ್ಷದಲ್ಲಿ ಆಗಿರುವ ಒತ್ತುವರಿ, ಮಾಡಿರುವ ತೆರವು ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಕಚೇರಿಗೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದರು. ಇದೆ ಸಂದರ್ಭದಲ್ಲಿ ನಾಗರಹೊಳೆ ಎ ವೈಲ್ಡ್‌ ಪ್ಯಾರಡೈಸ್‌ ಮತ್ತು ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಹೊರತಂದಿರುವ ವನ್ಯಜೀವಿ ವಿಧಿವಿಜ್ಞಾನ ಸಾಕ್ಷ್ಯ ಸಂಗ್ರಹಣಾ ಮಾರ್ಗದರ್ಶಿ ಎಂಬ ಎರಡು ಪುಸ್ತಕಗಳನ್ನು ಈಶ್ವರ ಖಂಡ್ರೆ ಬಿಡುಗಡೆ ಮಾಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಸುಭಾಷ್‌ ಮಾಲ್ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular