ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಕರೆ ನೀಡಿದ್ದು, ಅಕ್ರಮ ನಿವಾಸಿಗಳನ್ನು ಗುರುತಿಸಿ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ‘ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರ ಮೇಲೆ ನಾವು ನಿಗಾ ಇಡಬೇಕು. ಅವರೆಲ್ಲರನ್ನೂ ವಾಪಸ್ ಕಳುಹಿಸಬೇಕು’ ಎಂದರು.
ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಪರಮೇಶ್ವರ್, ‘ಕೇಂದ್ರ ಸರ್ಕಾರದ ಗುಪ್ತಚರ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಲ್ಲಿದ್ದಾರೆ. ಯಾವುದೇ ಸ್ಲೀಪರ್ ಸೆಲ್‌ಗಳನ್ನು (ಗುಪ್ತ ಭಯೋತ್ಪಾದಕ ಗುಂಪುಗಳು) ಪತ್ತೆಹಚ್ಚಿದರೆ, ರಾಷ್ಟ್ರೀಯ ಭದ್ರತೆಯನ್ನು ಖಾತರಿಪಡಿಸುವ ಸಲುವಾಗಿ ನಾವು ಆ ಮಾಹಿತಿಯನ್ನು ಕೇಂದ್ರ ಸರ್ಕಾರದೊಂದಿಗೆ ತಕ್ಷಣವೇ ಹಂಚಿಕೊಳ್ಳುತ್ತೇವೆ’ ಎಂದು ಹೇಳಿದರು.
ಗುರುವಾರ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾದ ಭರತ್ ಭೂಷಣ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ರಾಜ್ಯಪಾಲರು ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಅವರು, ನಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ಇರುವುದಾಗಿ ತಿಳಿಸಿದರು.