ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ದನಕರು, ಮೇಕೆ, ಕುರಿಗಳನ್ನು ಮೇಯಲು ಬಿಡುವುದನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ. ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಈ ಕುರಿತು ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಾಕು ಪ್ರಾಣಿಗಳು ಅರಣ್ಯದಲ್ಲಿ ಮೇಯುವದರಿಂದ ಅಲ್ಲಿನ ನೈಸರ್ಗಿಕ ಸಸಿಗಳು ನಾಶವಾಗುತ್ತವೆ. ಇದರಿಂದ ಅರಣ್ಯದ ನವೀಕರಣಕ್ಕೆ ಅಡೆತಡೆಯಾಗುತ್ತದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಮೇಯುತ್ತಿರುವ ಸಾಕು ಪ್ರಾಣಿಗಳಿಂದ ಕಾಡಿನ ಸಸ್ಯಹಾರಿ ವನ್ಯಜೀವಿಗಳಿಗೆ ಆಹಾರ ಕೊರತೆಯುಂಟಾಗುತ್ತದೆ. ಜೊತೆಗೆ, ಊರಿನಿಂದ ಬರುವ ಪ್ರಾಣಿಗಳಿಂದ ವನ್ಯಜೀವಿಗಳಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ವನ್ಯಜೀವಿ–ಮಾನವ ಸಂಘರ್ಷಗಳು ಕೂಡ ಹೆಚ್ಚಾಗುತ್ತವೆ. ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದೂ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಮಿಗಿಲಾಗಿ ಮದ್ರಾಸ್ ಹೈಕೋರ್ಟ್ “ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ನೀಡಿದ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಸೂಚಿಸಿದ್ದಾರೆ.
ತಮಿಳುನಾಡಿನ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಕರ್ನಾಟಕದ ಕಾಡುಗಳಿಗೆ ಸಾಕು ಪ್ರಾಣಿಗಳನ್ನು ಕರೆತಂದು ಮೇಯಿಸಲಾಗುತ್ತಿದೆ. ಈ ಕಾರಣದಿಂದ, ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಈ ರೀತಿಯ ಕ್ರಿಯೆಗಳನ್ನು ನಿಷೇಧಿಸಲು ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.