ಮೈಸೂರು : ಅರಣ್ಯ ವೃತ್ತದಲ್ಲಿ ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ತೋಡಲಾಗಿರುವ ಆನೆ ಕಂದಕಗಳ ಮತ್ತು ಅಳವಡಿಸಲಾದ ಸೌರ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡಿ, ವರದಿ ಸಲ್ಲಿಸುವಂತೆ ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಮೈಸೂರು ಅರಣ್ಯ ಭವನದಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ ಕಾಡಿನಂಚಿನಲ್ಲಿ ಬಿದಿರು ಬೆಳೆಸುವುದು ಮತ್ತು ಅರಣ್ಯದೊಳಗಿನ ನೀರು ಗುಂಡಿಗಳು ಬತ್ತದಂತೆ ಸೌರ ಪಂಪ್ ಸೆಟ್ ಮೂಲಕ ಕೊಳವೆ ಬಾವಿಗಳಿಂದ ನೀರು ಹರಿಸುವುದು ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬೇಸಿಗೆಯಲ್ಲಿ ಕಾಡ್ಗಿಚ್ಚು ಅರಣ್ಯ ನಾಶಕ್ಕೆ ಕಾರಣವಾಗುತ್ತದೆ. ಹೀಗಾಗಿ ಬರುವ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಂಭವಿಸದoತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ಕಾಡ್ಗಿಚ್ಚು ಕಾಣಿಸಿಕೊಂಡರೆ ಕೂಡಲೇ ನಂದಿಸಲು ಅಗ್ನಿಶಾಮಕ ಉಪಕರಣಗಳ ಸುಸ್ಥಿತಿಯನ್ನು ಖಾತ್ರಿಪಡಿಸಿಕೊಂಡು, ಸಿಬ್ಬಂದಿಯನ್ನು ಸನ್ನದ್ಧವಾಗಿರುವಂತೆ ನಿರ್ದೇಶಿಸಲು ಸೂಚಿಸಿದರು.
ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸಲು ಸೂಚನೆ :
ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದ್ದು, ನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಲೋಟ, ಬ್ಯಾನರ್, ಬಂಟಿಗ್ಸ್ ಸೇರಿದಂತೆ ಯಾವುದೇ ಏಕ ಬಳಕೆ ವಸ್ತು ಮಾರಾಟ, ಸಾಗಾಟ, ದಾಸ್ತಾನಿಗೆ ಅವಕಾಶ ಇಲ್ಲದಂತೆ ನಿಯಮಿತವಾಗಿ ತಪಾಸಣೆ ನಡೆಸಿ ದಂಡ ವಿಧಿಸಲು ಸೂಚನೆ ನೀಡಿದರು.
ಕಲುಷಿತ ನೀರು ಸೇವಿಸಿ ಯಾರೂ ಅಸ್ವಸ್ಥರಾಗಬಾರದು. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಗಳ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮೈಸೂರು ವೃತ್ತದ ಸಿಸಿಎಫ್ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.