ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ನಟ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು ಉಳಿದ ಆರೋಪಿಗಳನ್ನ ಮೈಸೂರು, ಶಿವಮೊಗ್ಗ, ಬೆಳಗಾವಿ ಹೀಗೆ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, 8 ರಿಂದ 10 ಜನರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಭದ್ರತಾ ದೃಷ್ಠಿಯಿಂದ ಶಿಫ್ಟ್ ಮಾಡಲಾಗಿದೆ. ಯಾರನ್ನು ಯಾವ ಜೈಲಿಗೆ ಶಿಫ್ಟ್ ಮಾಡಬೇಕೆಂಬುದನ್ನು ಪೊಲೀಸರೇ ನಿರ್ಧಾರ ಮಾಡಿದ್ದಾರೆ, ದರ್ಶನ್ ಸ್ಥಳಾಂತರ ಮಾಡಿರುವುದು ಅಧಿಕಾರಿಗಳ ತೀರ್ಮಾನವಾಗಿದೆ ಎಂದರು.
ದರ್ಶನ್ ಅವರ ಬಗ್ಗೆ ಕಟ್ಟುನಿಟ್ಟಾಗಿ ಮತ್ತು ಜಾಗರೂಕರಾಗಿರಲು ಬಳ್ಳಾರಿ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಗೃಹ ಸಚಿವರು, ಈ ಬಗ್ಗೆ ಜೈಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ, ಅದು ಅವರ ಕೆಲಸ, ಸರ್ಕಾರದ ಕೆಲಸವಲ್ಲ. ಇದೆಲ್ಲವನ್ನೂ ನೋಡಿಕೊಳ್ಳಲು ನಾವು ಸಾಮಾನ್ಯವಾಗಿ ಸೂಚನೆಗಳನ್ನು ನೀಡುತ್ತೇವೆ. ದರ್ಶನ್ ವಿಚಾರದಲ್ಲಿ ನಿಷ್ಠುರವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಜಮೀರ್ ಅಹ್ಮದ್, ಅವರು ನಟ ದರ್ಶನ್ ಗೆ ಆಪ್ತರು ಅದಕ್ಕಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆಯೇ ಎಂದು ಕೇಳಿದ್ದಕ್ಕೆ, ಪ್ರತಿ ಜಿಲ್ಲೆಗೂ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಯಾರೇ ಇದ್ದರೂ ಪರವಾಗಿಲ್ಲ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ, ಸಚಿವ ಜಮೀರ್ ಗೂ ನಟ ದರ್ಶನ್ ನನ್ನು ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.