ಮೈಸೂರು : ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಮೈಸೂರು ಸಿಲ್ಕ್ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾಹಿತಿ ಕಲೆ ಹಾಕಿದರು.
ನಂತರ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಮರು ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ತನ್ವೀರ್ ಸೇಠ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಚಿವರಿದ್ದಾರೆ ಗಲಭೆ ಪ್ರಕರಣಗಳಲ್ಲಿ ನಿಜವಾಗಿಯೂ ಭಾಗವಹಿಸಿದ್ದಾರ? ಸುಮ್ಮನೆ ಆರೋಪ ಮಾಡಿದ್ದಾರ ನೋಡಬೇಕಲ್ವಾ!… ಎಂದು ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡರು.
ರೇಷ್ಮೆ ಬೆಳೆ ಅಭಿವೃದ್ಧಿ ಪಡಿಸಲು ಚಿಂತನೆ: ಮೈಸೂರು ಜಿಲ್ಲೆಯಲ್ಲೂ ರೇಷ್ಮೆ ಬೆಳೆ ಅಭಿವೃದ್ಧಿ ಪಡಿಸಲು ಚಿಂತನೆ ಇದೆ. ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿ ಟೊಬ್ಯಾಕೋ ಬೆಳೆಗೆ ಪರ್ಯಾಯವಾಗಿ ಬೇರೆ ಬೆಳೆ ಪರಿಚಯಿಸಿ ಎಂಬ ಒತ್ತಾಯ ಇದೆ. ಚಾಮರಾಜನಗರ, ರಾಮನಗರದಂತೆ ಮೈಸೂರಿನಲ್ಲೂ ಒಂದು ರೇಷ್ಮೆ ಖರೀದಿ ಕೇಂದ್ರವನ್ನು ತೆರೆಯಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.
ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಶ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಸಚಿವರ ವಿರುದ್ಧ ಶಾಸಕರ ಅಸಮಾಧಾನ ವಿಚಾರ: ಸಚಿವರ ವಿರುದ್ಧ ಶಾಸಕರ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿ ಒಂದು ಮನೇಲಿ ನಾಲ್ಕು ಜನ ಇದ್ದರೆ, ಅವರಲ್ಲೇ ಭಿನ್ನಾಭಿಪ್ರಾಯ ಇರುತ್ತದೆ.
ಇನ್ನೂ ಸರ್ಕಾರ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ.
ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ಒಂದಷ್ಟು ಶಾಸಕರು ಪತ್ರ ಬರೆದಿರುವುದು ನಿಜ, ಅಂದ ಮಾತ್ರಕ್ಕೆ ಏನೋ ಆಗಿದೆ ಅಂದುಕೊಳ್ಳಬೇಕಿಲ್ಲ.ಸರ್ಕಾರ ಸುಭದ್ರವಾಗಿದೆ.ಇದನ್ನು ಕಂಡು ವಿರೋಧ ಪಕ್ಷದವರಿಗೆ ಹೊಟ್ಟೆ ಉರಿ. ಅದಕ್ಕೆ ಸಿಂಗಾಪುರ ಮತ್ತೊಂದು ಮಗದೊಂದು ಎಂದು ಏನೇನೋ ಮಾಡಿದ್ದಾರೆ. ಅದ್ಯಾವುದೂ ಇಲ್ಲಿ ನಡೆಯುವುದಿಲ್ಲ.ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರು ಏನೂ ಮಾಡೋಕೆ ಆಗೋಲ್ಲಎಂದು ಹೇಳಿದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ರೇಷ್ಮೆ ಸಚಿವ
ಪತ್ರಕರ್ತರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ ಸೀರೆ ರೇಟು ಗೊತ್ತಿಲ್ಲದೆ , ಸೀರೆಗಳ ರೇಟು ಎಷ್ಟಿದೆ ಅಂತ ನನಗೆ ಗೊತ್ತಿಲ್ಲ. 30 ಸಾವಿರ 40 ಸಾವಿರ ಇರಬಹುದು.ಅಷ್ಟು ದುಬಾರಿ ಸೀರೆ ಖರೀದಿಸಲು ಬಡವರಿಗೆ ಆಗುವುದಿಲ್ಲ ಎನ್ನುವ ಮಾತು ಇದೆ. ಮೊದಲು ನಾನು ಸೀರೆ ರೇಟು ಎಷ್ಟಿದೆ ಅಂತ ತಿಳಿದುಕೊಳ್ಳುತ್ತೇನೆ.
ಕಡಿಮೆ ರೇಟಿಗೆ ಸೀರೆ ತಯಾರು ಮಾಡಬಹುದೆ ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ನಂತರ ನಿಮಗೆ ತಿಳಿಸುತ್ತೇನೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.