ಶಿವಮೊಗ್ಗ: ಶಿಕ್ಷಣ ಸಚಿವ ತಮ್ಮ ಜನ್ಮದಿನವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ತಾವು ಪ್ರತಿನಿಧಿಸುವ ಸೊರಬ ಕ್ಷೇತ್ರದ ಸೊರಬ ಪುರಸಭೆ ಮತ್ತು ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರಿಗೆ ಉಚಿತ ವಿಮಾನಯಾನ ವ್ಯವಸ್ಥೆ ಮಾಡಿಸುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ನಗರವನ್ನು ಪ್ರತಿದಿನ ಸ್ವಚ್ಛವಾಗಿಡಲು ಶ್ರಮಿಸುವ 36 ಮಂದಿ ಪೌರಕಾರ್ಮಿಕರಿಗೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಉಚಿತವಾಗಿ ವಿಮಾನಯಾನ ಮಾಡಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇವರೊಂದಿಗೆ ಸೊರಬ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷ ಶೇ.97ಕ್ಕಿಂತ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದರು.
ಇದಕ್ಕೂ ಮೊದಲು ರೈಲು ಹಾಗೂ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಸಿದ್ದ ಈ ಎಲ್ಲರೂ ಇದೇ ಮೊದಲ ಬಾರಿಗೆ ಎಲ್ಲರೂ ಒಟ್ಟಾಗಿ ಶಿವಮೊಗ್ಗ ಏರ್‌ಪೋರ್ಟ್ ಮೂಲಕ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಪಯಣ ಬೆಳೆಸಿ ಖುಷಿಪಟ್ಟರು. ಸಚಿವ ಮಧು ಬಂಗಾರಪ್ಪ ಸ್ವತಃ ಅವರೊಂದಿಗೆ ಪ್ರಯಾಣಿಸಿ ಅವರ ಖುಷಿಯಲ್ಲಿ ಪಾಲ್ಗೊಂಡರು.



