ಬಳ್ಳಾರಿ : ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆ ಕ್ಷೇತ್ರಗಳ ಪೈಕಿ ಇದೀಗ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದು, ಚುನಾವಣಾ ಅಧಿಕಾರಿಗಳು ಇನ್ನಷ್ಟೇ ಗೆಲವು ಘೋಷಣೆ ಮಾಡಬೇಕಾಗಿದೆ.
ಆದರೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಗಾರು ಹನುಮಂತ ತೀವ್ರ ಮುಖಭಂಗ ಎದುರಿಸಿದ್ದು , ಅನ್ನಪೂರ್ಣ ತುಕಾರಾಮ ಅವರ ಗೆಲುವು ಖಚಿತವಾಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವ ಶಿವರಾಜ್ ತಂಗಡಗಿ ಮತದಾರರಿಗೆ ಹಣ ಹಂಚಿದ್ದಾರೆ ಕಾಂಗ್ರೆಸ್ ಹಣ ಹಂಚಿರುವ ಪ್ರದೇಶದಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಉಪಚುನಾವಣೆಯಲ್ಲಿ ಮತದಾನಕ್ಕೂ ಮುನ್ನ ಕಾಂಗ್ರೆಸ್ ಮತದಾರರಿಗೆ ಗ್ಯಾರಂಟಿಯ 2 ಸಾವಿರ ಹಣ ಹಾಕಿದೆ. ಸಚಿವ ಶಿವರಾಜ್ ತಂಗಡಗಿ ಮತದಾರರಿಗೆ ಹಣ ಹಂಚಿದ್ದಾರೆ. ಹಾಗಾಗಿ ಕಾಂಗ್ರೆಸ್ ಈ ಬಾರಿ ಗೆದ್ದಿದೆ. ಕಾಂಗ್ರೆಸ್ ಹಣ ಹಂಚಿದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ ಎಂದು ಉಪರಾಜದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ನಪೂರ್ಣ ತುಕಾರಾಂ ಅವರಿಗೆ 88727 ಮತಗಳನ್ನು ಪಡೆದುಕೊಂಡಿದ್ದರೆ, 79,622 ಮತಗಳನ್ನು ಬಂಗಾರು ಹನುಮಂತು ಪಡೆದುಕೊಂಡಿದ್ದಾರೆ. ಹಾಗಾಗಿ ಅನ್ನಪೂರ್ಣ ಅವರು 9105 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ ಎನ್ನಲಾಗಿದೆ.