ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಹಾಗೂ ವಕ್ಫ್ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಭಾಷಣದ ಮಧ್ಯೆ “ಕರಿಯ ಕುಮಾರಸ್ವಾಮಿ” ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಈ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಜನತಾದಳ (ಜಾತ್ಯತೀತ) ಆರೋಪಿಸಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಜಮೀರ್ ಅಹ್ಮದ್ ಖಾನ್ “ಕಾಲಾ ಕುಮಾರಸ್ವಾಮಿ” (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವ ಸಚಿವ ಜಮೀರ್ ಅಹ್ಮದ್ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧ ಎಂದು ಜನತಾದಳ ಟ್ವೀಟ್ ಮಾಡಿ ಟೀಕಿಸಿದೆ.
ಈ ಕೂಡಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಉಳಿಸಿಕೊಂಡಿದ್ದರೇ ಮೊದಲು ಈ ಜನಾಂಗೀಯ ದ್ವೇಷಿ ಸಚಿವ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸಿದೆ.
ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ನಾಯಕರ ಮೇಲೆ ಜನಾಂಗೀಯ ದಾಳಿ, ನಿಂದನೆಗಳ ಮಾಡುವುದೇ ಕಾಂಗ್ರೆಸ್ಸಿಗರ ಚಾಳಿ. ಇದು ಕಾಂಗ್ರೆಸ್ ಪಕ್ಷದ ನಿಜಮುಖ. ದ್ವೇಷ ಹರಡುವುದು, ವಿಭಜಿಸುವುದು ಮತ್ತು ಅಗೌರವ ತೋರುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದಕ್ಕೆಲ್ಲ ಜೆಡಿಎಸ್ ಪಕ್ಷ ಹೆದರಿ ಕೂರುವುದಿಲ್ಲ ಎಂದು ಹೇಳಿದೆ.