ಮಡಿಕೇರಿ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ. ಪಿ.ಸುಜಾ ಕುಶಾಲಪ್ಪ ಅವರು ಮಂಗಳವಾರ ‘ಕೊಡವ ಪರಂಪರೆ’ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಉಳಿದ ಕಾಮಗಾರಿ ನಡೆಯದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ಕಾಮಗಾರಿಗಳು ಹಾಗೂ ಆಗಬೇಕಾದ ಕಾಮಗಾರಿಗಳ ಕುರಿತು ವಾರದೊಳಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು. ಕೊಡಗು ಜಿಲ್ಲೆಯಲ್ಲಿ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಅನುದಾನವಿದ್ದರೂ ಕೆಲವು ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ ಇತರರು ಇದ್ದರು.