ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿಯು ಗರ್ಭ ಧರಿಸುವಂತೆ ಮಾಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಪೊಲೀಸರು ಬಂಧಿಸಿದ್ದಾರೆ.
೭ನೇ ತರಗತಿ ಓದುತ್ತಿದ್ದ ೧೩ ವರ್ಷದ ಬಾಲಕಿಯೊಬ್ಬಳು ಶಾಲಾ ಮುಖ್ಯೋಪಾಧ್ಯಾಯರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಗರ್ಭಿಣಿಯಾಗಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿನಿ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಒಂದು ವರ್ಷದ ಹಿಂದೆ ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ್ ಎಂಬಾತ ತಮ್ಮ ಕಚೇರಿಯಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ್ದರು ಎಂದು ಆರೋಪಿಸಲಾಗಿದೆ.
ಆಕೆ ವಿರೋಧಿಸಿದಾಗ, ಏನೂ ಆಗುವುದಿಲ್ಲ ಎಂದು ಹೇಳಿದ ಆತ ಆರು ತಿಂಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಅದನ್ನು ಯಾರಿಗೂ ಹೇಳದಂತೆ ಹೇಳಿದ್ದಾರೆ. ಬೇಸಿಗೆ ರಜೆ ಮುಗಿದು ೮ನೇ ತರಗತಿಗೆ ಸೇರಲು ವಿದ್ಯಾರ್ಥಿನಿ ಮುಂದಾಗಿದ್ದು, ಆಕೆಯ ಆರೋಗ್ಯದಲ್ಲಾದ ಬದಲಾವಣೆಯನ್ನು ಸಂತ್ರಸ್ತೆಯ ತಾಯಿ ಗಮನಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ, ಆಕೆ ಗರ್ಭಿಣಿಯಾಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್ ತಿಳಿಸಿದ್ದಾರೆ.