ವರದಿ: ವಿನಯ್ ದೊಡ್ಡಕೊಪ್ಪಲು
ಕೆ ಆರ್ ನಗರ: ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಅಮೃತ ಯೋಜನೆ ಕಾಮಗಾರಿಯಲ್ಲಿ ಲಕ್ಷಾಂತರ ಹಣ ದುರುಪಯೋಗವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಲೇಂದ್ರ ಆರೋಪಿಸಿದರು.
ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಣ ದೂರುಪಯೋಗದ ಕುರಿತು ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖೆ ಮಾಡಿ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಅಂಗನವಾಡಿ,ಶಾಲೆ, ಉದ್ಯಾವನ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ಕೋಟ್ಯಂತರ ಹಣವನ್ನ ಬಿಡುಗಡೆ ಮಾಡುತ್ತಿದೆ. ಆದರೆ ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮತ್ತು ಅಭಿವೃದ್ಧಿ ಅಧಿಕಾರಿ ಸರಿತಾ ಅವರು ಯೋಜನೆಯ ಹಣದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನ ಖರೀದಿಸಿದ್ದು ಸಾಕಷ್ಟು ಹಣ ಗೋಲ್ಮಾಲಾಗಿದೆ ಎಂದು ಗಂಬೀರ ಆರೋಪ ಮಾಡಿದರು.
ಸರ್ಕಾರದ ಹಣ ಪೋಲಾಗುತ್ತಿದೆ ಎಂದು ದೂರು ಬಂದ ಕೂಡಲೇ ಸರ್ಕಾರಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಆದರೆ ಗ್ರಾಮ ಪಂಚಾಯಿತಿ ಹಗರಣದ ಬಗ್ಗೆ ದೂರವನ್ನು ನೀಡಿದರೆ ಮೇಲ್ಮಟ್ಟದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದರು.
ಒಂದೇ ಯೋಜನೆಯಲ್ಲಿ 19 ಲಕ್ಷಕ್ಕೂ ಹೆಚ್ಚು ಹಣದಲ್ಲಿ ಮಾಡಿರುವ ಕಾಮಗಾರಿ ಕಳಪೆ ಆದರೂ ಮೇಲ್ಮಟ್ಟದ ಅಧಿಕಾರಿಗಳು ಕಂಡರೂ ಕಾಣದಂತಿರುವುದು ಏಕೆ ಎಂದು ಪ್ರಶ್ನಿಸಿದರು.
ಇಷ್ಟೆಲ್ಲ ದೂರುಗಳನ್ನು ನೀಡಿದರು ಗ್ರಾಮ ಪಂಚಾಯಿತಿ ಅಧಿಕಾರಿ ಗುತ್ತಿಗೆದಾರರಿಗೆ ಬಿಲ್ ಮಾಡಿಕೊಟ್ಟರೆ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಬ್ಬಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್, ಸದಸ್ಯ ನವೀನ್ ಇದ್ದರು.