ಮದ್ದೂರು: ಕಾಮಗಾರಿ ಮಾಡದೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿ ಎದುರು ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಪಂಚಾಯಿತಿ ಕಚೇರಿ ಎದುರು ಸದಸ್ಯರು ಪ್ರತಿಭಟಿಸಿ ಅಧ್ಯಕ್ಷ – ಉಪಾಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಎಲೆಕ್ಟ್ರಿಕಲ್ ಅಂಗಡಿಯಲ್ಲಿ ನಕಲಿ ಬಿಲ್ ಗಳನ್ನು ಪಡೆದು ದಿನಾಂಕ ಹಾಗೂ ಮೊತ್ತವನ್ನು ತಿದ್ದಿ ಲಕ್ಷಾಂತರ ರೂ ವಂಚಿಸಿದ್ದಾರೆ ಎಂದು ದೂರಿದರು.
2021- 22 ಹಾಗೂ 2022-03 ಸಾಲಿನಲ್ಲಿ 14ನೇ ಹಣಕಾಸು ಹಾಗೂ 15ನೇ ಹಣಕಾಸಿನ ವಿಶೇಷ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸುಮಾರು 75 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದರು.
ಹಾಲಿ ಅಧ್ಯಕ್ಷೆ ಸುಂದರಮ್ಮ, ಜಯಲಕ್ಷ್ಮಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಾ ಹಣ ದುರ್ಬಳಕೆ ಮಾಡಿಕೊಂಡಿದ್ದು,ಅಧ್ಯಕ್ಷರಲ್ಲದ ಅವಧಿಯಲ್ಲಿ ಸುಂದರಮ್ಮ ಬಿಲ್ ಗಳಿಗೆ ಸಹಿ ಮಾಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸುಂದರಮ್ಮರ ಪುತ್ರನ ಹೆಸರಿನಲ್ಲಿ 30 ಲಕ್ಷಕ್ಕೂ ಹೆಚ್ಚು ಹಣವನ್ನು ಬಿಲ್ ಮಾಡಿಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪಂಚಾಯಿತಿ ಸದಸ್ಯರಾದ ದಿವ್ಯ ರಾಮಚಂದ್ರ ಶೆಟ್ಟಿ, ಉಪಾಧ್ಯಕ್ಷೆ ಜ್ಯೋತಿ, ಸವಿತಾ ಮಹದೇಶ್, ಶಿವಸ್ವಾಮಿ, ಸತೀಶ್ ಚಂದ್ರ, ನಟರಾಜು ಇತರರಿದ್ದರು.