ಎಚ್ ಡಿ ಕೋಟೆ : ಪಟ್ಟಣದ ಇಂದಿರಾ ಕ್ಯಾಂಟೀನ್ ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಡುಗೆ ಮಾಡುವ ಮಹಿಳೆಯೊಬ್ಬರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಹಿಳಾ ಸಂಘ ಸಂಸ್ಥೆಯವರು ಮತ್ತು ರೈತ ಹೋರಾಟಗಾರರು ಇಂದಿರಾ ಕ್ಯಾಂಟೀನ್ ಗೆ ತೆರಳಿ, ಸೋಮವಾರ ಅಡುಗೆ ಮಾಡದಂತೆ ತಡೆದಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕ್ಯಾಂಟೀನ್ ಆರಂಭವಾದಾಗಳಿಂದಲೂ ಗ್ರಾಮೀಣ ಭಾಗದಿಂದ ಬಂದ ಬಡವರು ರೈತರು ಪಟ್ಟಣದ ಆಟೋ ಚಾಲಕರು ಸೇರಿದಂತೆ ಹಲವು ಮಂದಿ ಕಡಿಮೆ ವೆಚ್ಚದ ತಿಂಡಿ ಮತ್ತು ಊಟಕ್ಕೆ ಇಂದಿರಾ ಕ್ಯಾಂಟೀನ್ ಗೆ ಆಗಮಿಸಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು.

ಆದರೆ ಕೆಲ ನಾಲ್ಕು ದಿನಗಳಿಂದ ಅಡುಗೆ ಮಾಡುವ ಸಿಬ್ಬಂದಿ ಒಬ್ಬರು ಮಾನಸಿಕ ಸ್ಥಿಮಿತ ಕಳೆದುಕೊಂಡು ಒಬ್ಬೊಬ್ಬರೇ ಮಾತಾಡಿಕೊಳ್ಳುವುದು, ನೃತ್ಯ ಮಾಡುವುದು ಕಂಡು ಬಂದಿದೆ. ಇದನ್ನು ಮನಗಂಡ ಸಾರ್ವಜನಿಕರೊಬ್ಬರು ರೈತ ಮತ್ತು ಮಹಿಳಾ ಹೋರಾಟಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.
ಮಾಹಿತಿ ಮೇರೆಗೆ ರೈತ ಹಾಗೂ ಮಹಿಳಾ ಹೋರಾಟಗಾರರು ಇಂದಿರಾ ಕ್ಯಾಂಟೀನ್ ಗೆ ತೆರಳಿ ಊಟ ನೀಡುವಂತೆ ಹೇಳಿದ್ದಾರೆ. ಆದರೆ ಊಟಕ್ಕೆ ಅಡುಗೆಯನ್ನೇ ಮಾಡಿಲ್ಲದಿರುವುದು ಕಂಡು ಬಂದಿದೆ. ಜೊತೆಗೆ ಅಡುಗೆ ಸಿಬ್ಬಂದಿಯೊಬ್ಬರು ಮಾನಸಿಕ ಸ್ಥಿಮತೆ ಕಳೆದುಕೊಂಡ ವರ್ತಿಸುತ್ತಿದ್ದುದು ಕಂಡು ಬಂದಿದೆ.
ಕೂಡಲೇ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೈಲಾ ಸುಧಾಮಣಿ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ರವರನ್ನು ದೂರವಾಣಿ ಕರೆ ಮಾಡಿ ವಿಷಯವನ್ನು ಅರ್ಥೈಸಿದ್ದಾರೆ.
ನಂತರ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಸ್ತಳಕ್ಕಾಗಮಿಸಿ ಇಂದಿರಾ ಕ್ಯಾಂಟೀನ್ ಅನ್ನು ಗಮನಿಸಿದ್ದಾರೆ. ಈ ವೇಳೆ ಅಡುಗೆ ಮಾಡದಿರುವುದು, ಅಡುಗೆ ಸಿಬ್ಬಂದಿ ಮಹಿಳೆಯೊಬ್ಬರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವುದನ್ನು ಗಮನಿಸಿ ಅಡುಗೆ ಮಾಡದಂತೆ ತಡೆದಿದ್ದಾರೆ. ನಂತರ ಸಂಬಂಧಪಟ್ಟ ಗುತ್ತಿಗೆದಾರನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ನಾಳೆ ಖುದ್ದು ಬಂದು ಸಿಬ್ಬಂದಿಯನ್ನು ಬದಲಿಸುವಂತೆ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ಬಡವರಿಗಾಗಿ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿಮ್ ಅನ್ನು ತೆರೆಯಲಾಗಿದೆ. ಆದರೆ ಅದರ ಸದುಪಯೋಗ ಪಡೆದುಕೊಳ್ಳಲು ಬಡವರು ಬಂದರೆ ಅವರಿಗೆ ಇಲ್ಲಿ ಸರಿಯಾದ ಮಾನ್ಯತೆ ದೊರೆಯುತ್ತಿಲ್ಲದಿರುವುದು ಕಂಡುಬಂದಿದೆ. ಅಲ್ಲದೆ ಸಿಬ್ಬದ್ದಿಯ ಅನುಚಿತ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡುವಂತಿದೆ. ಆದ್ದರಿಂದ ಈ ದಿನ ಅಡುಗೆ ಮಾಡದಂತೆ ಸೂಚಿಸಲಾಗಿದೆ. ಅಲ್ಲದೇ ನಾಳೆ ಸಂಬಂಧಪಟ್ಟ ಗುತ್ತಿಗೆದಾರನಿಗೆ ಬರಲು ತಿಳಿಸಿದ್ದು, ಆಗಿರುವ ಅನಾಹುತದ ಬಗ್ಗೆ ತಿಳಿಸಿ ಸಿಬ್ಬಂದಿಗಳನ್ನು ಬದಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ರೈತ ಸಂಘದ ನಾಗರಾಜು, ಕೋಟೆಗೌಡ, ಆರ್.ಪಿ.ಐ ಜಿಲ್ಲಾಧ್ಯಕ್ಷೆ ಅನುಷಾ ಮಹಿಳಾ ಸಂಘಟನೆಯ ಅಧ್ಯಕ್ಷ ಶೈಲಾ ಸುಧಾಮಣಿ ಗ್ರಾಮ ಪಂಚಾಯತಿ ಸದಸ್ಯ ಎಸ್ ಮಹೇಶ್ ಇದ್ದರು.
