ಮಂಡ್ಯ: ನಗರದಿಂದ ನಿನ್ನೆ ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿನಿ ಲಿಖಿತಾ ಬೆಂಗಳೂರಿನ ಕೇಂಗೇರಿ ಪ್ರದೇಶದ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನ ಶೌಚಾಲಯ ಒಂದರಲ್ಲಿ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಅಷ್ಟರಲ್ಲಿ ಸ್ಥಳಕ್ಕೆ ಮಂಡ್ಯ ಪೊಲೀಸರು ಧಾವಿಸಿದ್ದು ಬಾಲಕಿಯ ಪ್ರಾಣ ಉಳಿಸಿದ್ದಾರೆ . ಇದೀಗ ಬಾಲಕಿಯನ್ನು ಮಂಡ್ಯಕ್ಕೆ ಕರೆತರಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.
ಮನೆಯವರ ಅನುಮಾನವೇ ನಾನು ಮನೆ ಬಿಟ್ಟು ತೆರಳಲು ಕಾರಣ ಎಂದಿರುವ ಬಾಲಕಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಳು. ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿ ಪ್ರಕರಣ ಅಂತ್ಯಗೊಂಡಿದೆ.
ಮಂಡ್ಯನಗರ ಹೊಸಹಳ್ಳಿಯಿಂದ ಲಿಖಿತಾ ನಾಪತ್ತೆಯಾಗಿರುವ ಬಗ್ಗೆ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಷಕರಾದ ಪ್ರಕಾಶ್ ದೂರು ದಾಖಲಿಸಿದ್ದರು, ಈ ಹಿನ್ನೆಲೆಯಲ್ಲಿ ಬಾಲಕಿಯ ಪತ್ತೆಗಾಗಿ ಮಂಡ್ಯ ಪೊಲೀಸರು ಮೂರು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದರು. ಸದ್ಯ ಆಕೆ ಕೇಂಗೇರಿ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಆಕೆಯನ್ನು ಮಂಡ್ಯಕ್ಕೆ ಕರೆತಂದ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.
