ಮಹಾಕುಂಭನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ವಸಂತ ಪಂಚಮಿ ಪ್ರಯುಕ್ತ ಇಂದು (ಸೋಮವಾರ) ಮೂರನೇ ಅಮೃತ ಸ್ನಾನ ನಡೆಯುತ್ತಿದ್ದು, ಸಂತರು, ದಾರ್ಶನಿಕರು ಸೇರಿದಂತೆ ಸಾವಿರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಂಚ ನಿರ್ವಾಣಿ ಅಖಾಡದ ಮಹಂತ್ ಸಂತೋಷ್ ದಾಸ್ ಬಾಬಾ ಮಹಾರಾಜ್, ‘ರಾಜಕೀಯ ನಾಯಕರು ತಮ್ಮ ಲಾಭಕ್ಕಾಗಿ ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಬಾರದು. ಜತೆಗೆ, ಸನಾತನ ಧರ್ಮದ ಕುರಿತು ವದಂತಿಗಳನ್ನು ಹಬ್ಬಿಸಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ನೀವು ಎಂದಿಗೂ ಸನಾತನ ಧರ್ಮವನ್ನು ಅನುಸರಿಸಿಲ್ಲ ಮತ್ತು ಗೌರವಿಸಿಲ್ಲ. ಆದ್ದರಿಂದ ಈಗ ಸನಾತನ ಧರ್ಮದ ಬಗ್ಗೆ ಮಾತನಾಡಿ ಲಾಭ ಪಡೆಯಲು ಪ್ರಯತ್ನಿಸಬೇಡಿ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಉತ್ತರ ಪ್ರದೇಶದಲ್ಲಿ ನಿಮ್ಮ ಪಕ್ಷ (ಸಮಾಜವಾದಿ ಪಕ್ಷ) ಅಧಿಕಾರದಲ್ಲಿದ್ದಾಗ ಸನಾತನ ಧರ್ಮದವರನ್ನು ಹೇಗೆ ಟಾರ್ಗೆಟ್ ಮಾಡಿದ್ದೀರಿ ಎಂಬುದನ್ನು ನಾವು ನೋಡಿದ್ದೇವೆ. ರಾಜಕೀಯ ಲಾಭಕ್ಕಾಗಿ ವದಂತಿಗಳನ್ನು ಹರಡಬೇಡಿ. ನಾವು ಸನಾತನಿಗಳು ನಿಮ್ಮಂತಹವರನ್ನು ಬೇರು ಸಮೇತ ಕಿತ್ತೊಗೆಯುತ್ತೇವೆ’ ಎಂದು ಬಾಬಾ ಮಹಾರಾಜ್ ಗುಡುಗಿದ್ದಾರೆ.
‘ಸನಾತನ ಧರ್ಮವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ನೋಡಿ ಕಲಿಯಿರಿ’ ಎಂದೂ ಅಖಿಲೇಶ್ ವಿರುದ್ಧ ಕಿಡಿಕಾರಿದ್ದಾರೆ.
ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆ ದಿನ (ಜ. 29) ಅಮೃತ ಸ್ನಾನದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತವು ‘ಪಿತೂರಿ’ಯ ಭಾಗವಾಗಿತ್ತೇ ಎಂಬ ಕುರಿತೂ ಉತ್ತರ ಪ್ರದೇಶದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆ ದಿನ ನಡೆದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.