ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಸರ್ಕಾರದಿಂದ ಗುತ್ತಿಗೆದಾರರಿಗೆ ಬರುತ್ತಿದ್ದ ಕಾಮಗಾರಿಗಳನ್ನು ತಪ್ಪಿಸಿ ಖಾಸಗಿ ಕಂಪನಿಗಳಿಗೆ ಕಾಮಗಾರಿ ನಡೆಸಲು ಅನುಮತಿ ನೀಡಿರುವುದಕ್ಕೆ ತಡೆ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದೇವೆ ಎಂದು ಎಸ್.ಸಿ, ಎಸ್.ಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ತಾಲೂಕಿನ ಹಿರಿಯ ಗುತ್ತಿಗೆದಾರ ತಿಮ್ಮಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆಯಲ್ಲಿ 40 ರಿಂದ 50% ಕಮಿಷನ್ ಪಡೆಯುವ ಉದ್ದೇಶದಿಂದ ಖಾಸಗಿ ಕಂಪನಿಗಳು ಕಾಮಗಾರಿ ನಡೆಸಲು ಶಾಸಕ ಅನಿಲ್ ಚಿಕ್ಕಮಾದು ಅನುವು ಮಾಡಿಕೊಟ್ಟಿದ್ದಾರೆ. ತಾಲೂಕಿನಲ್ಲಿ 300 ರಿಂದ 400 ಗುತ್ತಿಗೆದಾರರಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ನಮಗೆ ಕಾಮಗಾರಿ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಶಾಸಕರತ್ತ ಬೊಟ್ಟು ಮಾಡುತ್ತಾರೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಬರುತ್ತಿದ್ದ ಕಾಮಗಾರಿಗಳನ್ನು ತಡೆದು, ಕೆ.ಆರ್.ಐ.ಡಿ.ಎಲ್, ಲ್ಯಾಂಡ್ ಆರ್ಮಿ ಸೇರಿದಂತೆ ಇತರೆ ಖಾಸಗಿ ಕಂಪನಿಗಳು ಕಾಮಗಾರಿ ನಡೆಸುವಂತೆ ಕಳೆದ ವರ್ಷ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ನೀಡಿರುವ ಶಾಸಕ ಅನಿಲ್ ಚಿಕ್ಕಮಾದು, ಗುತ್ತಿಗೆದಾರರು ಬೀದಿಗೆ ಬರುವಂತೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಮೀಸಲಾತಿ ತೆಗೆದ ಶಾಸಕ : ಕಳೆದ 30 ವರ್ಷಗಳಿಂದ ನಾನು ಗುತ್ತಿಗೆದಾರನಾಗಿದ್ದೇನೆ. ತಾಲೂಕಿನ ಈ ಹಿಂದಿನ ಶಾಸಕ, ಸಚಿವ ಯಾರೂ ಗುತ್ತಿಗೆದಾರರಿಗೆ ಬರುತ್ತಿದ್ದ ಕಾಮಗಾರಿ ಕೈ ತಪ್ಪುವಂತೆ ಮಾಡಿರಲಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಖಾಸಗೀ ಕಂಪನಿಗಳಿಗೆ ಗುತ್ತಿಗೆ ನೀಡಿ ಕಮಿಷನ್ ಪಡೆಯಲು ಮುಂದಾಗಿದ್ದಾರೆ. ಮೀಸಲಾತಿ ಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶಾಸಕ, ಎಸ್ಸಿ, ಎಸ್ಟಿ ಸೇರಿದಂತೆ ಇತರೆ ವರ್ಗಗಳ ಗುತ್ತಿಗೆಯನ್ನು ಕೈ ತಪ್ಪಿಸಿರುವುದು ಎಷ್ಟು ಸರಿ ಎಂದು ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಸಾಗರೆ ಗ್ರಾಮದ ದಾಸನಾಯಕ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರ ಶಿವಲಿಂಗಯ್ಯ ಇದ್ದರು.
ಕ್ರಮ ಕೈಗೊಳ್ಳುವಂತೆ ದೂರು ದಾಖಲು
ಸರ್ಕಾರದಿಂದ ಅನುಮತಿ ಪಡೆದ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ ಕಮಿಷನ್ ಪಡೆಯಲು ಖಾಸಗಿ ಕಂಪನಿಗಳು ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸೇರಿದಂತೆ ಸರ್ಕಾರದ ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ, ಜಿಲ್ಲಾಧಿಕಾರಿ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಲಾಗಿದೆ. ಶಾಸಕರ ವಿರುದ್ಧ ತುರ್ತು ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ, ಡಿಸಿಎಂ ಸೇರಿದಂತೆ ರಾಹುಲ್ ಗಾಂಧಿಗೆ ಪತ್ರ ಬರೆಯಲಿದ್ದೇವೆ ಎಂದು ಗುತ್ತಿಗೆದಾರ ಹರೀಶ್ ಹೇಳಿದರು.