ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಡಿ ರವಿಶಂಕರ್ ಹೇಳಿದರು.ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಶಾಸಕರ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಅಂಬೇಡ್ಕರ್ ಅಭಿವೃದ್ಧಿ ಮತ್ತು ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾದ ಬೋರ್ವೆಲ್ ಪರಿಕರಗಳನ್ನು ವಿತರಿಸಿ ಮಾತನಾಡಿದರು.
7 ಮಂದಿ ವಿವಿಧ ಫಲಾನುಭವಿಗಳಿಗೆ ಈ ಪರಿಕರಗಳನ್ನು ತಮ್ಮ ಜಮೀನಿನಲ್ಲಿ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಅಳವಡಿಸಿಕೊಳ್ಳಲು ನಿಗಮದ ಅಧಿಕಾರಿಗಳು ಸಹಾಯ ಮತ್ತು ಸಹಕಾರ ನೀಡಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಹರಿಗೆ ಬೋರ್ವೆಲ್ ಪರಿಕರಗಳು ಮತ್ತು ಇತರ ಅನುಕೂಲಗಳನ್ನು ಸರ್ಕಾರದ ವತಿಯಿಂದ ನೀಡಲಿದ್ದು ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿತ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಆ ನಂತರ ಶಾಸಕರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರೆ ಸುಮಿತ ಅವರೊಂದಿಗೆ ಕಚೇರಿ ಆವರಣವನ್ನು ಪರಿಶೀಲಿಸಿ ರಸ್ತೆಗೆ ಹೊಂದಿಕೊಂಡಂತಿರುವ ಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಿ ವರದಿ ನೀಡಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಹೆಚ್.ಎಸ್. ಸ್ವಾಮಿ, ಕಾಳಯ್ಯ, ಅಕ್ಕಯ್ಯಮ್ಮ, ಸಣ್ಣಸ್ವಾಮಿ, ಗೌರಮ್ಮ, ರಾಮಮ್ಮ ಮತ್ತು ಮೂರ್ತಿ ಅವರುಗಳಿಗೆ ಬೋರ್ವೆಲ್ ಪರಿಕರಗಳನ್ನು ಶಾಸಕರು ವಿತರಣೆ ಮಾಡಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲೂಕು ಅಭಿವೃದ್ದಿ ಅಧಿಕಾರಿ ಕೆ. ಸುನಿಲ್ ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ಕಾಂಗ್ರೆಸ್ ವತ್ತಾರ ಸೈಯದ್ ಜಾಬೀರ್, ದಲಿತ ಮುಖಂಡ ಚಿಬುಕಹಳ್ಳಿಬಲರಾಮು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ಟಿ ಎ ಪಿ ಸಿ ಎಂ ಎಸ್ ಮಾಜಿ ನಿರ್ದೇಶಕ ಜಿ. ಆರ್. ಮಹದೇವ್, ಕುಪ್ಪೆ ಗ್ರಾಮ ಸದಸ್ಯ ಮಹೇಂದ್ರ, ಮುಖಂಡರಾದ ಗಂಗಾಧರ್, ಶಂಕರ್, ರಾಜು ನಾಯಕ ಮತ್ತಿತರರು ಇದ್ದರು.