Saturday, April 12, 2025
Google search engine

Homeರಾಜಕೀಯಶವ ಮುಂದಿಟ್ಟುಕೊoಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗಿಲ್ಲ-ಸಾ.ರಾ.ಮಹೇಶ್ ವಿರುದ್ದ ಶಾಸಕ ಡಿ.ರವಿಶಂಕರ್ ವಾಗ್ದಾಳಿ

ಶವ ಮುಂದಿಟ್ಟುಕೊoಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗಿಲ್ಲ-ಸಾ.ರಾ.ಮಹೇಶ್ ವಿರುದ್ದ ಶಾಸಕ ಡಿ.ರವಿಶಂಕರ್ ವಾಗ್ದಾಳಿ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಶವವನ್ನು ಮುಂದಿಟ್ಟುಕೊoಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ ಅದು ಪ್ರಚಾರಕ್ಕಾಗಿ ರಾಜಕೀಯ ಮಾಡುವವರ ಜಾಯಮಾನ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ದ ಶಾಸಕ ಡಿ.ರವಿಶಂಕರ್ ಪರೋಕ್ಷ ವಾಗ್ದಾಳಿ ನಡೆಸಿದರು.

ಚಂದಗಾಲು ಗ್ರಾಮದ ಮಹದೇವನಾಯಕರ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ಅವರು ಅನಗತ್ಯವಾಗಿ ಕೆಟ್ಟ ರಾಜಕಾರಣ ಮಾಡುತ್ತಿದ್ದು ,ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ ಈ ಹಿಂದೆ ನೀವು ಶಾಸಕರಾಗಿದ್ದ 15 ವರ್ಷಗಳ ಅವಧಿಯಲ್ಲಿ ಇಂತಹಾ ಹತ್ತಾರು ಘಟನೆಗಳು ನಡೆದಿದ್ದವು ಆಗ ನಾವು ನಿಮಗೆ ಸಹಕಾರ ನೀಡಿರಲಿಲ್ಲವೇ ಎಂದು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಹುನ್ನಾರ ನಡೆದಿತ್ತು ಎಂದು ಸಾ.ರಾ.ಮಹೇಶ್ ಆರೋಪಿಸಿದ್ದು ,ಇದು ಸಾಬೀತಾದರೆ ನಾನು ನನ್ನ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಲಿದ್ದು ಇದಕ್ಕೆ ಸೂಕ್ತ ಸಾಕ್ಷಾಧಾರ ಇದೆಯಾ ನೀವು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.

ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಹತ್ತು ವರ್ಷದ ಹಿಂದೆ ಯುವಕನೋರ್ವನ ಕೊಲೆಯಾಗಿ ಗ್ರಾಮವೇ ಹೊತ್ತಿ ಉರಿಯುತ್ತಿದ್ದಾಗ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಲು ಸಹಕಾರ ನೀಡಿದ್ದೆ ಆದರೆ ಈಗ ನೀವು ಮಾಡುತ್ತಿರುವ ಕೆಲಸವಾದರೂ ಏನೆಂದು ಕೇಳಿದ ಶಾಸಕರು ಇದರ ಜತೆಗೆ ಸಿದ್ದಾಪುರ ಮತ್ತು ನಾರಾಯಣಪುರ ಗ್ರಾಮದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಬೇಕು ಎಂದು ಮಾಜಿ ಸಚಿವರನ್ನು ಕುಟುಕಿದರು.

ಸಾಲಿಗ್ರಾಮ ಪಟ್ಟಣದ ದಲಿತರ ಮನೆಗಳ ಮೇಲೆ ನಿಮ್ಮ ಸಹೋದರ ಕಲ್ಲುಹೊಡೆಸಿ ತೊಂದರೆ ನೀಡಿದಾಗ ಸಭೆ ನಡೆಸಿದ ನೀವು ನೊಂದ ದಲಿತ ಕುಟುಂಬಗಳಿಗೆ ಪರಿಹಾರ ಕೊಡಿಸುತ್ತೇನೆ ಎಂದು ಬೂಟಾಟಿಕೆಯ ರಾಜಿ ಕಬೂಲಿ ಮಾಡಿದ್ದಿರಿ ಆದರೆ ಈವರೆಗೆ ಒಬ್ಬ ನೊಂದ ದಲಿತನಿಗಾದರೂ ಪರಿಹಾರ ದೊರೆತಿದೆಯೇ ಎಂದು ಮರುಪ್ರಶ್ನೆ ಹಾಕಿದರು.

ಸೋಮವಾರ ಮಧ್ಯಾಹ್ನ ಮೃತ ಮಹದೇವನಾಯಕನ ಶವದ ಮುಂದೆ ಗಿಮಿಕ್ ರಾಜಕಾರಣ ಮಾಡಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡಿ ಬರೆಯಿಸಿದ್ದ ಪರಿಹಾರದ ಚೆಕ್ಕನ್ನು ಅಧಿಕಾರಿಗಳಿಗೆ ಬೆದರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ ಮೂಲಕ ಕೊಡಿಸಿದ್ದು ಎಷ್ಟು ಸರಿ ಎಂದು ಕೇಳಿದರು.

ಮೃತ ಕುಟುಂಬಕ್ಕೆ ಪರಿಹಾರದ ಚೆಕ್ ಕೊಡಿಸಲು ನೀವೇನು ಕ್ಷೇತ್ರದ ಶಾಸಕರೋ ಅಥವಾ ಉನ್ನತ ಅಧಿಕಾರಿಯೋ ಎಂದ ಅವರು ಮುಂದಾದರೂ ಅಭಿವೃದ್ದಿ ವಿಚಾರದಲ್ಲಿ ಸಹಕಾರ ನೀಡಿ ಇಲ್ಲವಾದರೆ ನನಗೆ ಕೆಲಸ ಮಾಡುವುದು ಗೊತ್ತಿದೆ ಎಂದು ಹೇಳಿದರು.

ಕೆಲವು ಯುವಕರಿಂದ ನನ್ನ ಮತ್ತು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿಸಿದ್ದೀರಿ ಹೀಗೆ ಮಾಡಲು ನನಗೂ ಬರುತ್ತದೆ ಆದರೆ ಅಂತಹಾ ನೀಚ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ ಈ ವಿಚಾರದಲ್ಲಿ ನಾನು ನಡೆದುಕೊಂಡಿರುವುದು ಜವಾಬ್ದಾರಿಯಿಂದ ಆದರೆ ಸಾ.ರಾ.ಮಹೇಶ್ ಮಾಡಿರುವುದು ನಾಟಕವೆಂದು ಜರಿದರು.

ಈ ಕುಟುಂಬಕ್ಕೆ ತೊಂದರೆ ನೀಡಿದ ಚೀರ‍್ನಹಳ್ಳಿ ಗ್ರಾಮದ ಲೋಕೇಶ್ ವಿರುದ್ದ ಪೋಕ್ಸೋ, ಎಸ್‌ಸಿ/ಎಸ್ಟಿ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾಯ್ದೆಯಡಿ ಕೇಸು ದಾಖಲಿಸಿ ಘಟನೆ ನಡೆದ ದಿನವೇ ಆತನನ್ನು ಬಂಧಿಸುವುದರ ಜತೆಗೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ನಿರೀಕ್ಷಕ ಪಿ.ಪಿ.ಸಂತೋಷ್, ಎಎಸ್‌ಐ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಅಮಾನತ್ತು ಮಾಡಲಾಗಿದೆ ಎಂದರು.

ಇದರ ಜತೆಗೆ ಇಡೀ ಪ್ರಕರಣದ ಬಗ್ಗೆ ನಾನು ಮುಖ್ಯಮಂತ್ರಿಗಳೊoದಿಗೆ ಚರ್ಚಿಸಿ ಸರ್ಕಾರದಿಂದ ದೊರೆಯುವ ಎಲ್ಲಾ ಪರಿಹಾರವನ್ನು ಕೊಡಿಸಲು ಗಮನಹರಿಸಿದ್ದು ಸಾವನ್ನಪ್ಪಿದ್ದ ಮಹದೇವನಾಯಕ ಮತ್ತು ಪುತ್ರಿ ಲೀಲಾವತಿ ಅವರುಗಳಿಗೆ ಈಗ ತಲಾ ೪.೧೫ ಲಕ್ಷ ಪರಿಹಾರದ ಚೆಕ್ ಕೊಡಿಸಿದ್ದು ಆ ನಂತರ ೪.೧೫ ಲಕ್ಷ ಮೊತ್ತದ ಚೆಕ್ ಕೊಡಿಸಿ ಇತರ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಪರಿಹಾರದ ಜತೆಗೆ ವೈಯುಕ್ತಿಕವಾಗಿಯೂ ೨ ಲಕ್ಷ ಹಣ ಕೊಟ್ಟಿದ್ದು ಇದರೊಂದಿಗೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯ ಶಿವುನಾಯಕ್ ಅವರು ೨೫ ಸಾವಿರ ನೀಡಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿರುವ ಇಬ್ಬರ ಹೆಚ್ಚಿನ ಚಿಕಿತ್ಸೆಗೆ ನಾನೇ ೨೫ ಸಾವಿರ ಸಹಾಯ ಮಾಡಿದ್ದು ಮುಂದಿನ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ ಶಾಸಕರು ಇದರಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ ಎಂದು ನುಡಿದರು.

ಘಟನೆ ನಡೆದ ಕ್ಷಣದಿಂದ ಈವರೆಗೂ ನಾನು ಶಾಸಕನಾಗಿ ಜವಾಬ್ದಾರಿಯಿಂದ ವರ್ತಿಸಿದ್ದು ಇದಕ್ಕೆ ಸರ್ವರ ಸಹಕಾರವನ್ನು ಪಡೆದಿದ್ದೇನೆ ಮತ್ತು ಇದು ನನ್ನ ಕರ್ತವ್ಯವಾಗಿದ್ದು ಇಂತಹಾ ವಿಚಾರಗಳಲ್ಲಿಯೂ ರಾಜಕೀಯ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲೆಂದು ಹಾರೈಸಿದರು.

ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಕಲ್ಲಹಳ್ಳಿಶ್ರೀನಿವಾಸ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಚಂದಗಾಲು ಗ್ರಾ.ಪಂ. ಅಧ್ಯಕ್ಷ ಸತೀಶ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಶಿವುನಾಯಕ್, ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಕೆ.ಎಸ್.ಶಂಕರ್, ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಲ್ಲಾ ನಿರ್ದೇಶಕ ದಿಡ್ಡಹಳ್ಳಿ ಡಿ.ಜೆ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಎಸ್‌ಟಿ ವಿಭಾಗದ ತಾಲೂಕು ಅಧ್ಯಕ್ಷ ತಿಪ್ಪೂರುಮಹದೇವನಾಯಕ, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್‌ಜಾಬೀರ್, ತಾ.ಪಂ. ಮಾಜಿ ಸದಸ್ಯ ನಂಜುoಡ ಸುದ್ದಿಗೋಷ್ಠಿಯಲ್ಲಿದ್ದರು.

RELATED ARTICLES
- Advertisment -
Google search engine

Most Popular