ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಆ,೧೫ ರಂದು ಗುರುವಾರ ನಡೆಯಲಿರುವ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲು ತೀರ್ಮಾನ ಮಾಡಲಾಯಿತು. ಪಟ್ಟಣದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಶಾಸಕ ಡಿ.ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರ ಸಲಹೆ ಪಡೆದು ಅಂತಿಮವಾಗಿ ಈ ನಿರ್ಧಾರ ಕೈಗೊಳ್ಳಲಾಯಿತು.
ಶಾಸಕ ಡಿ.ರವಿಶಂಕರ್ ಮಾತನಾಡಿ ಅಂದು ಬೆಳ್ಳಿಗ್ಗೆ ೭.೩೦ಕ್ಕೆ ಪಟ್ಟಣದ ಜೂನಿಯರ್ ಕಾಲೇಜು ಬಳಿಯಿಂದ ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ದೇಶಾಭಿಮಾನಿಗಳ ಸಮ್ಮುಖದಲ್ಲಿ ಪಥಸಂಚಲನ ಆರಂಭಿಸಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ತೆರಳಿ ಹಾಸನ-ಮೈಸೂರು ರಸ್ತೆ ಮೂಲಕ ಪುರಸಭೆ ಬಯಲು ರಂಗ ಮಂದಿರಕ್ಕೆ ಸಾಗಿ ಬರಬೇಕೆಂದು ಸೂಚನೆ ನೀಡಿದರು.
ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ನಡೆಯುವ ಬಯಲು ರಂಗ ಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿ ರಾಷ್ಟ್ರೀಯ ಹಬ್ಬದ ಯಶಸ್ಸಿಗೆ ಹೆಗಲು ಕೊಟ್ಟು ದುಡಿಯಬೇಕೆಂದು ಆದೇಶಿಸಿದರು.
ಪಥ ಸಂಚನಲದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬಯಲು ರಂಗ ಮಂದಿರದ ಆವರಣದಲ್ಲಿ ಧ್ವಜಾರೋಹಣಕ್ಕಿಂತ ಮುಂಚಿತವಾಗಿ ಉಪಹಾರ ನೀಡಬೇಕೆಂದು ತಿಳಿಸಿದ ಶಾಸಕರು ಪ್ರತಿಯೊಬ್ಬ ಸರ್ಕಾರಿ ನೌಕರರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಾಕೀತು ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವುದರ ಜತೆಗೆ ಪಟ್ಟಣದ ಎಲ್ಲಾ ಸರ್ಕಾರಿ ಕಛೇರಿಗಳಿಗೂ ದೀಪಾಲಂಕಾರ ಮಾಡಬೇಕೆಂದು ಹೇಳಿದ ಶಾಸಕ ಡಿ.ರವಿಶಂಕರ್ ಮೆರವಣಿಗೆ ತೆರಳುವ ರಸ್ತೆಯ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಕಟ್ಟಡಗಳಿಗೆ ದೀಪಾಲಂಕಾರ ಮಾಡಿ ರಾಷ್ಟ್ರೀಯ ಹಬ್ಬದ ಮೆರಗನ್ನು ಹೆಚ್ಚಿಸಬೇಕೆಂದು ಕೋರಿದರು.
ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ ಮಾತನಾಡಿ ಸಾಲಿಗ್ರಾಮ ತಾಲೂಕಿನಲ್ಲಿಯೂ ವೈಭವದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದ್ದು ಸರ್ವರ ಸಹಕಾರದಿಂದ ಕಾರ್ಯಕ್ರಮ ನಡೆಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ಕೆ.ಆರ್.ನಗರ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದನ್ನು ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಮುಂದಿನ ಮೂರು ದಿನಗಳೊಳ್ಳಗೆ ಮತ್ತೊಮ್ಮೆ ಅಧಿಕಾರಿಗಳ ಸಭೆ ಕರೆದು ರೂಪು ರೇಷೆ ಸಿದ್ದಪಡಿಸುವುದಾಗಿ ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಸರಿತಾಜವರಪ್ಪ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಮಾಜಿ ಸದಸ್ಯ ಕೆ.ವಿನಯ್, ಕಾಂಗ್ರೆಸ್ ಮುಖಂಡರಾದ ನಂದೀಶ್, ಕಂಠಿಕುಮಾರ್, ರಾಜಯ್ಯ, ಬಿ.ಎಂ.ಗಿರೀಶ್, ಕಳ್ಳಿಮುದ್ದನಹಳ್ಳಿಚಂದ್ರು, ಹೆಚ್.ಎಸ್.ಸ್ವಾಮಿ, ವ್ಯಾನ್‌ಸುರೇಶ್, ತಿಮ್ಮಶೆಟ್ಟಿ, ರೈತ ಮುಖಂಡರಾದ ಎಂ.ಜೆ.ಕುಮಾರ್, ಎ.ತಿಮ್ಮೇಗೌಡ, ಬಿಇಒ ಆರ್.ಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್.ವಿನೀತ್, ಅರ್ಕೇಶ್ವರಮೂರ್ತಿ, ಗುರುರಾಜ್, ವಿ.ಸುಮಿತ, ಎಡಿಎಲ್‌ಆರ್ ಶ್ರೀಕಂಠಶರ್ಮ, ಸಾಮಾಜಿಕ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಸಿಡಿಪಿಒ ಸಿ.ಎಂ.ಅಣ್ಣಯ್ಯ ಇದ್ದರು.