ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಮರಿತಿಬ್ಬೇಗೌಡ ಅವರು ಐದನೇ ಬಾರಿಗೆ ದಾಖಲೆಯ ಜಯ ಸಾಧಿಸಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರವಾಗಿ ಶಾಸಕ ಡಿ.ರವಿಶಂಕರ್ ಮತಯಾಚಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಸದಾ ಶಿಕ್ಷಕ ಏಳಿಗೆಗೆ ಮತ್ತು ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದು ಇದನ್ನು ಅರಿತು ಪ್ರಭುದ್ದ ಶಿಕ್ಷಕ ಮತದಾರರು ನಮ್ಮನ್ನು ಬೆಂಬಲಿಸಬೇಕು ಎಂದರು.
ಹೊರ ಗುತ್ತಿಗೆ ನೌಕರಿಯಲ್ಲಿಯು ಮೀಸಲಾತಿ ಜಾರಿಗೆ ತರಲು ನಿರ್ಧಾರ ಮಾಡಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಏಳನೇ ವೇತನ ಆಯೋಗವನ್ನು ರಚನೆ ಮಾಡಿದ್ದು ಈಗಾಗಲೇ ವರದಿಯನ್ನು ಪಡೆದಿದ್ದು ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಅದನ್ನು ಅನುಷ್ಠಾನ ಮಾಡಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಕಳೆದ ನಾಲ್ಕು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರ‍್ರಾಮಾಣಿಕವಾಗಿ ಕೆಲಸ ಮಾಡಿರುವ ಮರಿತಿಬ್ಬೇಗೌಡರು ಸದಾ ಶಿಕ್ಷಕರ ಒಳಿತಿಗೆ ಚಿಂತನೆ ಮಾಡುತ್ತಿದ್ದು ಅವರು ಚುನಾಯಿತರಾದರೆ ಕಾಂಗ್ರೆಸ್ ಸರ್ಕಾರದ ಸಹಕಾರದಿಂದ ಭವಿಷ್ಯದಲ್ಲಿ ಶಿಕ್ಷಕರಿಗೆ ಉತ್ತಮ ಕಾರ್ಯಯೋಜನೆಗಳನ್ನು ತರಲು ಅನುಕೂಲವಾಗಲಿದ್ದು ಇದನ್ನು ಅರಿತು ಶಿಕ್ಷಕ ಬಾಂಧದವರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮತದಾರ ಶಿಕ್ಷಕರ ಮನೆ ಬಾಗಿಲಿಗೆ ತೆರಳಿ ಸರ್ಕಾರದ ಸಾಧನೆಯನ್ನು ತಿಳಿಸಿ ಮತಯಾಚನೆ ಮಾಡಬೇಕು ಎಂದು ಸಲಹೆ ನೀಡಿದರು.ಆನಂತರ ಅವರು ಪಕ್ಷದ ನಾಯಕರೊಂದಿಗೆ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ಮರಿತಿಬ್ಬೇಗೌಡರ ಪರವಾಗಿ ಮತ ಕೇಳಿದರು.
ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಕಲ್ಲಹಳ್ಳಿಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸಂದೇಶ್, ಯುವ ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಸರಿತಾಜವರಪ್ಪ, ಸೈಯದ್‌ಜಾಬೀರ್, ಕೆ.ಎನ್.ಪ್ರಸನ್ನಕುಮಾರ್, ಪುರಸಭೆ ಸದಸ್ಯ ನಟರಾಜು, ಮಾಜಿ ಸದಸ್ಯ ಪೆರಿಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಕಾಂಗ್ರೆಸ್ ಮುಖಂಡರಾದ ಸೌಮ್ಯಲೋಕೇಶ್, ಹೆಚ್.ಎಸ್.ವೇಣುಗೋಪಾಲ್, ಸುಮಂತ್, ಹೊಸೂರು ಡೈರಿ ಮಾದು ,ಬಿಇಒ ಆರ್.ಕೃಷ್ಣಪ್ಪ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ದಾಸಪ್ಪ, ಜಗದೀಶ್, ಚೆಲುವರಾಜು ಮತ್ತಿತರರು ಇದ್ದರು.