ಹುಣಸೂರು: ಟಿಬೇಟಿಯನ್ನರ ಅತ್ಯುಚ್ಛ ಧರ್ಮಗುರು, ನೊಬೆಲ್ ಶಾಂತಿಪ್ರಶಸ್ತಿ ಪುರಸ್ಕೃತ ೧೪ನೇ ದಲೈಲಾಮರನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ಮಾಡಿ ಆಶೀರ್ವಾದ ಪಡೆದರು.
ತಾಲೂಕಿನ ಗುರುಪುರ ಟಿಬೇಟಿಯನ್ ಪುನರ್ವಸತಿ ಕೇಂದ್ರದಲ್ಲಿ ಬೀಡುಬಿಟ್ಟಿರುವ ಧರ್ಮಗುರು ದಲೈಲಾಮರನ್ನು ಭೇಟಿ ಮಾಡಿದ ವೇಳೆ ಶಾಸಕರನ್ನು ತುಂಬುಹೃದಯದಿಂದ ಆಶೀರ್ವದಿಸಿ, ನಿಮ್ಮ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು. ನಂತರ ಧರ್ಮಗುರುಗಳೊಂದಿಗಿನ ಗಂಟೆಗೂ ಹೆಚ್ಚು ಕಾಲ ಹರೀಶ್‌ಗೌಡ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಧರ್ಮಗುರುಗಳ ಭೇಟಿ ಮತ್ತು ನೀಡಿದ ಆಶೀರ್ವಾದ ನನ್ನ ಮನಸನ್ನು ಉಲ್ಲಸಿತಗೊಳಿಸಿದೆ. ಅವರಿಂದ ಸಕಾರಾತ್ಮಕ ಶಕ್ತಿಗಳನ್ನು ಪಡದಿದ್ದೇನೆ. ತಮ್ಮ ತಾಯಿನಾಡಿಗಾಗಿ ಶಾಂತಿಯುತವಾಗಿ ಹಲವು ದಶಕಗಳಿಂದ ಹೋರಾಡುತ್ತಿರುವ ಟಿಬೇಟಿಯನ್ನರಿಗೆ ಭಾರತ ಬೆನ್ನೆಲುಬಾಗಿ ನಿಂತಿದೆ. ಅವರ ಹೋರಾಟಕ್ಕೆ ಶೀಘ್ರ ಫಲಸಿಕ್ಕಲಿ ಎಂದು ಆಶಿಸುತ್ತೇನೆ ಎಂದರು.
ಈ ವೇಳೆ ಟಿಬೇಟಿಯನ್ ಪುನರ್ವಸತಿ ಕೇಂದ್ರದ ಅಧಿಕಾರಿಗಳು, ಮತ್ತು ಟಿಬೇಟಿಯನ್ ನಿವಾಸಿಗಳು ಹಾಜರಿದ್ದರು.